ಬೆಂಗಳೂರಿನಾದ್ಯಂತ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ, ಸಂಚಾರ ದಟ್ಟಣೆ: ಹಲವು ಜಿಲ್ಲೆಗಳಲ್ಲೂ ವರುಣ ಧಾರೆ

ರಾಜಧಾನಿ ಬೆಂಗಳೂರಿನ ಹಲವು ಕಡೆ ಧಾರಾಕಾರ ಮತ್ತು ಇನ್ನು ಕೆಲವು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಮಂಗಳವಾರ ನಸುಕಿನಿಂದಲೇ ಸುರಿಯುತ್ತಿದ್ದು ಶಾಲಾ ಕಾಲೇಜುಗಳಿಗೆ ತೆರಳುವವರಿಗೆ, ಕಚೇರಿ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಇಂದು ಮಳೆಗೆ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ನೀರಿನಲ್ಲಿಯೇ ಸಾಗಿದ ಪರಿಸ್ಥಿತಿ
ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಇಂದು ಮಳೆಗೆ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ನೀರಿನಲ್ಲಿಯೇ ಸಾಗಿದ ಪರಿಸ್ಥಿತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಕಡೆ ಧಾರಾಕಾರ ಮತ್ತು ಇನ್ನು ಕೆಲವು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಮಂಗಳವಾರ ನಸುಕಿನಿಂದಲೇ ಸುರಿಯುತ್ತಿದ್ದು ಶಾಲಾ ಕಾಲೇಜುಗಳಿಗೆ ತೆರಳುವವರಿಗೆ, ಕಚೇರಿ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ಗುಡುಗು ಸಹಿತ ಮಳೆಯಾಗಿದ್ದು ಮೋಡ ಕವಿದ ವಾತಾವರಣವಿದೆ. 

ಜನರು ರೈನ್ ಕೋಟ್ ಧರಿಸಿ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿಕೊಳ್ಳಲು ಓಡಾಡುತ್ತಿರುವುದು ಕಂಡುಬಂತು. ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ ಮನ್ಸೂಚನೆ ಸಿಕ್ಕಿದ್ದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಬೆಂಗಳೂರಿನಲ್ಲಿ ಮಳೆ: ಬೆಂಗಳೂರಿನ ಮೆಜೆಸ್ಟಿಕ್​​, ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಸರ್ಕಲ್, ಶಿವಾಜಿನಗರ, ಕೆ.ಆರ್.ಮಾರ್ಕೆಟ್​, ಮೈಸೂರು ರಸ್ತೆ, ಮಾಗಡಿ ರಸ್ತೆ, ವಿಜಯನಗರ, ಜಯನಗರ, ಶಿವಾನಂದ ಸರ್ಕಲ್​, ಮೇಖ್ರಿ ಸರ್ಕಲ್, ರಾಜಾಜಿನಗರ, ಯಶವಂತಪುರ, ಚಂದ್ರಾಲೇಔಟ್, ನಂದಿನಿ ಲೇಔಟ್​, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಬನಶಂಕರಿ, ಬಸವನಗುಡಿ, ಹೆಬ್ಬಾಳ, ಯಲಹಂಕ, ಶ್ರೀನಗರ, ಆರ್.ಟಿ.ನಗರ ಸೇರಿ ಹಲವೆಡೆ ಮಳೆಯಾಗಿದೆ. 

ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಗೆ ನದಿಯಂತಾಗಿರುವ ಬೆಂಗಳೂರಿನ ಪ್ರಮುಖ ರಸ್ತೆಗಳಿಂದ ಹಲವೆಡೆ ಟ್ರಾಫಿಕ್ ಜಾಮ್​ ಉಂಟಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಕೆಲದಿನ ಮಳೆ ಮುಂದುವರಿಕೆ: ಮುಂದಿನ ನಾಲ್ಕೈದು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ. ಅಲ್ಲದೆ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳಲ್ಲಿ ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಧಾರವಾಡ, ಗದಗ, ರಾಯಚೂರು, ಕೊಪ್ಪಳ, ಯಾದಗಿರಿಗಳಲ್ಲೂ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲೂ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com