ಆಗಸ್ಟ್ 1 ರೊಳಗೆ ಅನ್ನಭಾಗ್ಯ ಯೋಜನೆ ಜಾರಿ: ರಾಜ್ಯ ಸರ್ಕಾರ

ಜುಲೈ 1 ರಂದು ರಾಜ್ಯ ಸರ್ಕಾರಕ್ಕೆ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗದಿರಬಹುದು. ಆದರೆ, ಆ.1ರೊಳಗೆ ಯೋಜನೆ ಜಾರಿಗೆ ತರುತ್ತೇವೆಂದು ರಾಜ್ಯ ಸರ್ಕಾರ ಗುರುವಾರ ಹೇಳಿದೆ.
ಸಚಿವ ಮುನಿಯಪ್ಪ
ಸಚಿವ ಮುನಿಯಪ್ಪ

ಬೆಂಗಳೂರು: ಜುಲೈ 1 ರಂದು ರಾಜ್ಯ ಸರ್ಕಾರಕ್ಕೆ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗದಿರಬಹುದು. ಆದರೆ, ಆ.1ರೊಳಗೆ ಯೋಜನೆ ಜಾರಿಗೆ ತರುತ್ತೇವೆಂದು ರಾಜ್ಯ ಸರ್ಕಾರ ಗುರುವಾರ ಹೇಳಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು, ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದರಿಂದ ಜುಲೈ.1 ರಂದು ಯೋಜನೆ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಆದರೆ, ಆಗಸ್ಟ್ 1ರೊಳಗೆ ಯೋಜನೆ ಜಾರಿಗೆ ತರುತ್ತೇವೆಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಅಕ್ಕಿ ನಿರಾಕರಿಸಿದ್ದರಿಂದ ಅಕ್ಕಿ ಸಂಗ್ರಹಿಸಲು ಸರ್ಕಾರ ಹೊಸ ಮಾರ್ಗವನ್ನು ಕಂಡುಕೊಕಂಡಿದೆ. ಅಕ್ಕಿ ನೀಡಲು ಪಂಜಾಬ್ ಮತ್ತು ಛತ್ತೀಸ್‌ಗಢ ಒಪ್ಪಿಗೆ ನೀಡಿದೆ. ಹೀಗಾಗಿ ಆ.1ರೊಳಗೆ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಮತ್ತು ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದೆ. ಮೂರು ದಿನ ಕಾದರೂ ಸಚಿವರು ಭೇಟಿಗೆ ಕಾಲಾವಕಾಶ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರೂ ಕೇಂದ್ರ ಸರ್ಕಾರದಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಸಂಬಂಧಪಟ್ಟ ಸಚಿವರೊಂದಿಗೆ (ಪಿಯೂಷ್ ಗೋಯಲ್) ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಅಮಿತ್ ಶಾ ಭರವಸೆ ನೀಡಿದ್ದಾರೆ. ಆದರೆ, ಈ ವರೆಗೂ ಯಾವುದೇ ಮಾಹಿತಿಗಳಾಗಲೀ, ಮಾತುಕತೆಗಳಾಗಲೀ ನಡೆದಿಲ್ಲ.

ಹೀಗಾಗಿ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಒದಗಿಸುವಂತೆ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ಕೇಂದ್ರೀಯ ಭಂಡಾರ್‌ಗೆ ಆರ್ಡರ್ ನೀಡಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com