ಮತಬೇಟೆಗೆ ಅಸ್ತ್ರವಾದ ಬಜೆಟ್: ಆದಾಯ 4,000 ಕೋಟಿ ರೂ. ಇದ್ದರೂ ರೂ.11,000 ಕೋಟಿ ಬಜೆಟ್ ಮಂಡಿಸಿದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನ 2023-24ನೇ ಸಾಲಿನ ಬಜೆಟ್‌ ಗುರುವಾರ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನಲ್ಲಿರುವ ಯೋಜನೆಗಳ ಪುನರುಚ್ಚಾರ, 3-4 ಹೊಸ ಘೋಷಣೆಗಳೊಂದಿಗೆ ಚುನಾವಣೆಗೆ ಘೋಷವಾಕ್ಯವಾಗುವ ಬಜೆಟ್'ನ್ನು ಬಿಬಿಎಂಪಿ ಮಂಡನೆ ಮಾಡಿದೆ.
ಜಯರಾಂ ರಾಯ್ಪುರ
ಜಯರಾಂ ರಾಯ್ಪುರ
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ 2023-24ನೇ ಸಾಲಿನ ಬಜೆಟ್‌ ಗುರುವಾರ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನಲ್ಲಿರುವ ಯೋಜನೆಗಳ ಪುನರುಚ್ಚಾರ, 3-4 ಹೊಸ ಘೋಷಣೆಗಳೊಂದಿಗೆ ಚುನಾವಣೆಗೆ ಘೋಷವಾಕ್ಯವಾಗುವ ಬಜೆಟ್'ನ್ನು ಬಿಬಿಎಂಪಿ ಮಂಡನೆ ಮಾಡಿದೆ.

ಈ ಬಾರಿಯ ಬಿಬಿಎಂಪಿ ಬಜೆಟ್ ಗಾತ್ರ 11,163.97 ಕೋಟಿ ಆಗಿದ್ದು, ರಾಜ್ಯ ರಾಜಧಾನಿಗೆ ಮೂಲಸೌಕರ್ಯವನ್ನು ಹೆಚ್ಚಿಸುವ ಭರವಸೆಯನ್ನು ನೀಡಲಾಗಿದೆ. ವಾಸ್ತವವಾಗಿ ಬಿಬಿಎಂಪಿ ವಾರ್ಷಿಕ 3-4 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಆದರೂ ಸರ್ಕಾರದ ಅನುದಾನವನ್ನು ನೆಚ್ಚಿಕೊಂಡು ಬರೋಬ್ಬರಿ 11 ಸಾವಿರ ಕೋಟಿಗೂ ಅಧಿಕ ಬಜೆಟ್'ನ್ನು ಮಂಡನೆ ಮಾಡಿದೆ.

ಬಿಬಿಎಂಪಿಯು ತೆರಿಗೆ ಮತ್ತು ಕರಗಳ ಆದಾಯದ ಮೂಲದಿಂದ ರೂ.3 ಸಾವಿರ ಕೋಟಿ, ತೆರಿಗೇತರ ಆದಾಯದ ಮೂಲದಿಂದ ರೂ.1 ಸಾವಿರ ಕೋಟಿ ಸಂಗ್ರಹವಾಗಲಿದೆ. ಸಿಬ್ಬಂದಿ ವೇತನ, ಇಂಧನ, ಸಭೆ, ಸಮಾರಂಭ ಆಡಳಿತ ವಚ್ಚ ಸೇರಿದಂತೆ ಇತರೆ ಕೆಲಸಕ್ಕೇ ಸುಮಾರು 2,000 ಕೋಟಿಗೂ ಅಧಿಕ ವೆಚ್ಚವಾಗಲಿದೆ. ಇದಲ್ಲದೇ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ 2 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಮೂಲಕ ಬಿಬಿಎಂಪಿ ಸಂಗ್ರಹ ಮಾಡುವ ಆರ್ಥಿಕ ಸಂಪನ್ಮೂಲವೂ ಬಿಬಿಎಂಪಿಯ ಆಡಳಿತ ಮತ್ತು ನಿರ್ವಹಣೆಗೇ ಸಾಕಾಗುವುದಿಲ್ಲ. ಇನ್ನು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೆ, ಅನಿವಾರ್ಯವಾಗಿ ಸರ್ಕಾರದ ಅನುದಾನವನ್ನು  ನೆಚ್ಚಿಕೊಳ್ಳಬೇಕಾಗುತ್ತದೆ.

ಬಿಬಿಎಂಪಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ತನ್ನ ಆಯವ್ಯಯದಲ್ಲಿ ರೂ.3,632 ಕೋಟಿ ಅನುದಾನ ನೀಡಿದೆ. ಅಲ್ಲದೆ, ಬೆಂಗಳೂರಿಗೆ ಹಲವು ಯೋಜನೆಗಳನ್ನು ಘೋಷಿಸಿದೆ. ಬಿಬಿಎಂಪಿ ಕೂಡ ಇದೇ ಯೋಜನೆಗಳನ್ನು ಪುನರುಚ್ಛರಿಸಿದ್ದು, 3-4 ಹೊಸ ಯೋಜನೆಗಳನ್ನು ಸೇರ್ಪಡೆಗೊಳಿಸಿರುವುದು ಕಂಡು ಬಂದಿದೆ.

ಈ ನಡುವೆ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, 2023-24ರ ಬಿಬಿಎಂಪಿ ಬಜೆಟ್ ಮೊತ್ತವು ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಬಜೆಟ್ ಮೊತ್ತವು ರೂ 8,000-9,000 ಮೀರಬಾರದು. ಆದರೆ, ಬಿಬಿಎಂಪಿ ಹಣಕಾಸಿನ ಜವಾಬ್ದಾರಿ ಕಾಯ್ದೆ ಮತ್ತು ಹೊಸ ಬೆಂಗಳೂರು ಕಾಯ್ದೆಗೆ ಬದ್ಧವಾಗಿಲ್ಲದಿರುವುದು ಕಂಡು ಬಂದಿದೆ. ಕಳೆದ ವರ್ಷದ ಪರಿಷ್ಕೃತ ಬಜೆಟ್ ಅಂದಾಜಿಗಿಂತ ಈ ಬಾರಿಯ ಬಜೆಟ್ 1,236.8 ಕೋಟಿ ರೂ. ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಬಜೆಟ್‌ ಅಂದಾಜು 11,000 ಕೋಟಿ ರೂ.ಗಿಂತ ಹೆಚ್ಚಿದೆ. ಏಕೆಂದರೆ ಇದರಲ್ಲಿ ರಾಜ್ಯ ಸರ್ಕಾರದಿಂದ ಅನುದಾನದ ರೂಪದಲ್ಲಿ 6,000 ಕೋಟಿ ಮತ್ತು ಬಿಬಿಎಂಪಿಯ ಗಳಿಕೆಯ 5,000 ಕೋಟಿ ರೂ.ಗಳನ್ನು ಸೇರ್ಪಡೆಗೊಳಿಸಲಾಗಿರುವುದು ಎಂದು ಹೇಳಿದೆ.

ನಾಗರಿಕರ ಸಲಹೆ ಮತ್ತು ಬೇಡಿಕೆಯಂತೆ ಬಜೆಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ ಸಿಂಹಪಾಲು ನೀಡಲಾಗಿದ್ದು, ಎಲಿವೇಟೆಡ್ ಕಾರಿಡಾರ್, ಗ್ರೇಡ್ ಸಪರೇಟರ್, ವೈಟ್ ಟಾಪಿಂಗ್ ಮತ್ತಿತರ ಸಿವಿಲ್ ಕಾಮಗಾರಿಗಳಿಗೆ 4,030 ಕೋಟಿ ರೂ ಮೀಸಲಿಡಲಾಗಿದೆ. ಇನ್ನು ಪ್ರಮುಖ ಸಮಸ್ಯೆಯಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್‌ಗೆ 15 ಲಕ್ಷ ರೂ.ಗಳ ವಿಶೇಷವಾಗಿ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೂ ಒತ್ತು ನೀಡಲಾಗಿದೆ. ಆರೋಗ್ಯ ವಿಭಾಗಕ್ಕೆ 165 ಕೋಟಿ ರೂಗಳನ್ನು ಮೀಸಲಿಟ್ಟಿದೆ. ನಗರದಲ್ಲಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮನಗಂಡ ನಿಗಮವು ನಗರದಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಸರ್ಕ್ಯೂಟ್ ರಚಿಸಲು ನಿರ್ಧರಿಸಿದೆ.

ನಗರವು ಅಗಾಧವಾಗಿ ಬೆಳೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವ ವಲಯಕ್ಕೆ ಎಷ್ಟು ಬಜೆಟ್ ಅಗತ್ಯವಿದೆ ಎಂಬುದನ್ನು ಪಾಲಿಕೆ ತಿಳಿಸಬೇಕಿದೆ. ನಗರಕ್ಕೆ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ಮಾಡುವುದರಿಂದ ಹೆಚ್ಚಿನ ಭ್ರಷ್ಟಾಚಾರಗಳಿಗೂ ಇದು ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ವರ್ಷ ಮಂಜೂರು ಮಾಡಿದ್ದ ಅನುದಾನದ ಹಣ ಇಲ್ಲಿಯವರೆಗೂ ಬಳಕೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.

“ನಾಗರಿಕರು ಮತ್ತು ತಜ್ಞರು ನೀಡಿದ ಎಲ್ಲಾ ಸಲಹೆಗಳನ್ನು ನಾವು ಸಂಯೋಜಿಸಿದ್ದೇವೆ, ಇದು ಬಜೆಟ್ ಮೊತ್ತ ಹೆಚ್ಚಾಗಲು ಕಾರಣವಾಗಿದೆ. ಬೆಂಗಳೂರಿ ಅತಿವೇಗವಾಗಿ ಬೆಳೆಯುತ್ತಿದ್ದು, ಸುಧಾರಣೆಯ ಅಗತ್ಯವಿದೆ. ಹೀಗಾಗಿ ನಗರದಕ್ಕೆ ದೊಡ್ಡ ಮಟ್ಟದ ಅನುದಾನದ ಅಗತ್ಯವಿದೆ. ಯೋಜನೆಗಳ ಅನುದಾನ ಕುರಿತು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗುವುದು, ಅದನ್ನು ಕಳೆದ ವರ್ಷದಂತೆ ಪರಿಷ್ಕರಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com