ಬೆಂಗಳೂರು ಬಜೆಟ್: ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, 4,000 ಕೋಟಿ ರೂ. ಮೀಸಲಿಟ್ಟ ಬಿಬಿಎಂಪಿ

ವೈಟ್‌ಟಾಪ್‌ನಿಂದ ಹಿಡಿದು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿ, ಮೇಲ್ಸೇತುವೆ ನಿರ್ಮಾಣ, 75 ಜಂಕ್ಷನ್‌ಗಳ ಸುಧಾರಣೆ, ಸಿಗ್ನಲ್ ರಹಿತ ಕಾರಿಡಾರ್ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 4,030 ಕೋಟಿ ರೂಯನ್ನು ಪಾಲಿಕೆ ಮೀಸಲಿಟ್ಟಿದೆ.
ಬಿಬಿಎಂಪಿ ಬಜೆಟ್
ಬಿಬಿಎಂಪಿ ಬಜೆಟ್
Updated on

ಬೆಂಗಳೂರು: ವೈಟ್‌ಟಾಪ್‌ನಿಂದ ಹಿಡಿದು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿ, ಮೇಲ್ಸೇತುವೆ ನಿರ್ಮಾಣ, 75 ಜಂಕ್ಷನ್‌ಗಳ ಸುಧಾರಣೆ, ಸಿಗ್ನಲ್ ರಹಿತ ಕಾರಿಡಾರ್ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 4,030 ಕೋಟಿ ರೂಯನ್ನು ಪಾಲಿಕೆ ಮೀಸಲಿಟ್ಟಿದೆ.

ಗುರುವಾರ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಮ್ಮ ಬಜೆಟ್ ಭಾಷಣದಲ್ಲಿ ಬಿಬಿಎಂಪಿಯ 2023-24ರ ಆಯವ್ಯಯದಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಮತ್ತಿಕೆರೆ ಬಳಿಯ ಗೋಕುಲ ರಸ್ತೆ, ಜಾಲಹಳ್ಳಿಯ ಒಆರ್‌ಆರ್‌-ಪೈಪ್‌ಲೈನ್‌ ಜಂಕ್ಷನ್‌, ಜಯಮಹಲ್‌ ರಸ್ತೆ ಮತ್ತು ಸದಾಶಿವನಗರ ಪೊಲೀಸ್‌ ಠಾಣೆ ವೃತ್ತದ ಮೇಖ್ರಿ ಸರ್ಕಲ್‌ ಅಂಡರ್‌ಪಾಸ್‌ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ 210 ಕೋಟಿ ರೂ. ಮೀಸಲಿಡಲಾಗಿದೆ ಎಂದು ಘೋಷಿಸಿದರು.

150 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು 1,410 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು, 350 ಕಿ.ಮೀ.ಗಳ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ 450 ಕೋಟಿ ರೂ., ಎಲಿವೇಟೆಡ್ ರೋಟರಿ ಮೇಲ್ಸೇತುವೆ ಮತ್ತು ತಡೆರಹಿತ ಸಂಪರ್ಕ ಮೇಲ್ಸೇತುವೆ, ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು 345 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, 110 ಗ್ರಾಮಗಳಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಅಗೆದ ರಸ್ತೆಗಳ ಮರುನಿರ್ಮಾಣಕ್ಕೆ 300 ಕೋಟಿ ರೂ. ಮತ್ತಿಕೆರೆ, ಸಂಜಯನಗರ ಮತ್ತು ಯಶವಂತಪುರಕ್ಕೆ ನೇರ ಸಂಪರ್ಕ ಕಲ್ಪಿಸಲು ಸಬರ್ಬನ್ ರೈಲ್ವೆ ಸಹಯೋಗದಲ್ಲಿ ಯಶವಂತಪುರ ರೈಲು ನಿಲ್ದಾಣದಿಂದ ನ್ಯೂ-ಬಿಇಎಲ್ ರಸ್ತೆಗೆ ಸಮಗ್ರ ಮೇಲ್ಸೇತುವೆ ನಿರ್ಮಾಣವನ್ನು 200 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 150 ಕೋಟಿ ರೂ ವೆಚ್ಚದಲ್ಲಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ ಸ್ಥಿತಿ ಸರಿಪಡಿಸಲಾಗುವುದು ಎಂದರು.

ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗೆ ಸಿಗ್ನಲ್‌ ರಹಿತ ಕಾರಿಡಾರ್‌, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಿಂದ ಕುರುಬರಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ಹೂಡಿ ಜಂಕ್ಷನ್‌ನಲ್ಲಿ ಫ್ಲೈಓವರ್‌ಗಳು, ಐಟಿಪಿಎಲ್ ಬಿಗ್‌ಬಜಾರ್ ಜಂಕ್ಷನ್ ಮತ್ತು ವಿಲ್ಸನ್‌ ಗಾರ್ಡನ್ ನಲ್ಲಿ ಹೋಪ್‌ಫಾರ್ ಮತ್ತು ಗ್ರೇಡ್ ಸಪರೇಟರ್ ಸೇರಿದಂತೆ ಒಂಬತ್ತು ಯೋಜನೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com