ವಿಜಯಪುರ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಮಂಡ್ಯ ಲೋಕಸಭಾ ಸಂಸದೆ, ನಟಿ ಸುಮಲತಾ ಅಂಬರೀಶ್ ಆಡಳಿತಾರೂಢ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಈ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದಿದ್ದಾರೆ.
ವರದಿಗಳ ಪ್ರಕಾರ, ಸಂಸದೆ ಸುಮಲತಾ ಶುಕ್ರವಾರ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸೇರುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಮಾರ್ಚ್ 12 ರಂದು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮತ್ತು ಅಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಡ್ಯದಲ್ಲಿ ನಡೆಯಲಿರುವ 1.5 ಕಿ.ಮೀ ಉದ್ದದ ರೋಡ್‌ಶೋನಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದೆ.
ಸುಮಲತಾ ಬಿಜೆಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ಮತ್ತು ಈ ಸಂಬಂಧ ಸುದ್ದಿಗೋಷ್ಠಿ ಕರೆದಿರುವ ಕುರಿತು ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ಪ್ರಕ್ರಿಯೆ ಪ್ರಗತಿಯಲ್ಲಿದೆ, ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಮೇ ತಿಂಗಳ ವೇಳೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮಂಡ್ಯ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಕಷ್ಟು ಸೂಚನೆಗಳಿವೆ.
ಸುಮಲತಾ ಬಿಜೆಪಿ ಸೇರುವ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಬಯಸದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೀವು ಇಷ್ಟು ದಿನ ಕಾಯುತ್ತಿದ್ದೀರಿ, ಇನ್ನೂ 24 ಗಂಟೆಗಳ ಕಾಲ ಕಾಯಿರಿ ಎಂದರು.
ಮುಂದುವರಿದು, ನಾನು ಈ ಬಗ್ಗೆ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ, ನನಗೆ ಗೊತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಶಕ್ತಿಯನ್ನು ಹೊಂದಿದ್ದಾನೆ. ಯಾರಾದರೂ ಪಕ್ಷಕ್ಕೆ ಸೇರುವ ಮೂಲಕ, ಅದು ಖಂಡಿತವಾಗಿಯೂ ಆಯಾ ಕ್ಷೇತ್ರಗಳಲ್ಲಿ ಅದನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
59 ವರ್ಷದ ಸುಮಲತಾ ಅವರು ಕನ್ನಡದ ಜನಪ್ರಿಯ ನಟ ಕಮ್ ರಾಜಕಾರಣಿ ಎಂಹೆಚ್ ಅಂಬರೀಶ್ ಅವರ ಪತ್ನಿ. ಇತ್ತೀಚೆಗಷ್ಟೇ ಮಂಡ್ಯದಲ್ಲಿ ಸುಮಲತಾ ಮತ್ತು ಅಂಬರೀಶ್ ಅವರ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಸಮಾನ ಮನಸ್ಕ ಜನರ ಗುಂಪೊಂದು ಸಭೆ ನಡೆಸಿ, ರಾಜ್ಯ ರಾಜಕಾರಣಕ್ಕೆ ಬರುವಂತೆ ಒತ್ತಾಯಿಸಿ ನಿರ್ಣಯಗಳನ್ನು ಅಂಗೀಕರಿಸಿತ್ತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ 2019ರಲ್ಲಿ 1,25,876 ಮತಗಳಿಂದ ಗೆದ್ದಿದ್ದರು. ಅವರು ಅಂದಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಹಣಾಹಣಿಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ, ನಟ ಹಾಗೂ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಹಾಗೂ ಸುಮಲತಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಆರಂಭದಲ್ಲಿ ಸುಮಲತಾ ಅವರು ತಮ್ಮ ಪತಿ ಮಂಡ್ಯವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದರು. ಆದರೆ, ಮೈತ್ರಿಯ ಕಾರಣದಿಂದಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಯಿತು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರವಿತ್ತು.
Advertisement