ಚಾಮರಾಜನಗರ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಬಹಿಷ್ಕಾರ ಪ್ರಕರಣ; 12 ಮಂದಿ ಬಂಧನ

ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಬಹಿಷ್ಕಾರ ಹಾಕಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ 12 ಜನರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಬಹಿಷ್ಕಾರ ಹಾಕಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ 12 ಜನರನ್ನು ಬಂಧಿಸಿದ್ದಾರೆ.

ಆರೋಪಿಗಳ ಮೇಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಈ ಹಿಂದೆ ನಾಲ್ವರನ್ನು ಬಂಧಿಸಿದ್ದರು ಮತ್ತು ಎಂಟು ಆರೋಪಿಗಳು ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಮಹಿಳೆ ಸೇರಿದಂತೆ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕುಟುಂಬ ಕಲ್ಯಾಣ ಇಲಾಖೆ ಸಂತ್ರಸ್ತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ.

ಪೊಲೀಸರ ಪ್ರಕಾರ, ದಂಪತಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದು, ಗ್ರಾಮಸ್ಥರಿಗೆ ಈ ವಿಷಯ ಇತ್ತೀಚೆಗೆ ತಿಳಿದುಬಂದಿದೆ. ನಂತರ ದಂಪತಿಗೆ 6 ಲಕ್ಷ ದಂಡ ವಿಧಿಸಿ, ಬಹಿಷ್ಕಾರ ಹಾಕಿದ್ದರು. ಬಳಿಕ ದಂಪತಿ ಮಾರ್ಚ್ 1 ರಂದು ಕೊಳ್ಳೇಗಾಲದ ಪೊಲೀಸ್ ಉಪಾಧೀಕ್ಷಕ ಕಚೇರಿಗೆ ದೂರು ನೀಡಿದ್ದಾರೆ.

ಉಪ್ಪಾರ ಶೆಟ್ಟಿ ಸಮುದಾಯಕ್ಕೆ ಸೇರಿದ ಗೋವಿಂದರಾಜು ಎಂಬುವವರು ಮಂಡ್ಯ ಮೂಲದ ಪರಿಶಿಷ್ಟ ಜಾತಿಗೆ ಸೇರಿದ ಶ್ವೇತಾಳನ್ನು ಪ್ರೀತಿಸುತ್ತಿದ್ದರು. ಇಬ್ಬರು ಮದುವೆಯಾಗಲು ನಿರ್ಧರಿಸಿದಾಗ, ಮನೆಯವರು ಒಪ್ಪಿಗೆ ಸೂಚಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೆರವೇರಿಸಿದ್ದರು.

ಬಳಿಕ ಗೋವಿಂದರಾಜು ತಮ್ಮ ಹೆಂಡತಿಯೊಂದಿಗೆ ಮಳವಳ್ಳಿ ಪಟ್ಟಣದಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ಹೆಂಡತಿಯೊಂದಿಗೆ ಹುಟ್ಟೂರಾದ ಕುಣಗಲ್ಲಿಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ಬರುತ್ತಿದ್ದರು. ಕಳೆದ ತಿಂಗಳು ದಂಪತಿ ಕುಣಗಲ್ಲಿಗೆ ಭೇಟಿ ನೀಡಿದಾಗ, ಶ್ವೇತಾ ಮಾತನಾಡುತ್ತಾ ತಪ್ಪಾಗಿ ನೆರೆಹೊರೆಯವರೊಂದಿಗೆ ನಾವು ದಲಿತರು ಎಂದು ಹೇಳಿದ್ದಾರೆ.

ಈ ವಿಷಯ ಗ್ರಾಮದ ಹಿರಿಯರಿಗೆ ತಲುಪಿ ಫೆ. 23ರಂದು ಸಭೆ ನಡೆಸಿ ದಂಪತಿಯ ಪೋಷಕರನ್ನು ಕರೆಸಿ 3 ಲಕ್ಷ ದಂಡ ವಿಧಿಸಿ ಮಾರ್ಚ್ 1ರೊಳಗೆ ದಂಡ ಕಟ್ಟುವಂತೆ ತಿಳಿಸಿದ್ದಾರೆ. ದಂಪತಿ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ಆದರೆ, ದೂರಿನ ವಿಷಯ ತಿಳಿದ ಹಿರಿಯರು ದಂಡದ ಮೊತ್ತವನ್ನು 6 ಲಕ್ಷಕ್ಕೆ ಹೆಚ್ಚಿಸಿ ಗ್ರಾಮದಲ್ಲಿ ಗೋವಿಂದರಾಜು ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

ಗ್ರಾಮಸ್ಥರು ಕುಟುಂಬವನ್ನು ಗ್ರಾಮದಿಂದ ಹೊರಗೆ ಕಳುಹಿಸಿ, ಗ್ರಾಮದಿಂದ ಪಡಿತರ, ತರಕಾರಿ, ಹಾಲು ಖರೀದಿಸಬಾರದು ಮತ್ತು ನೀರು ತೆಗೆದುಕೊಳ್ಳಬಾರದು ಎಂದು ಆದೇಶಿಸಿದ್ದಾರೆ ಮತ್ತು ಅವರ ಈ ಆದೇಶವನ್ನು ಉಲ್ಲಂಘಿಸಿದರೆ ದಂಪತಿಯನ್ನು ಜೀವಂತ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com