5 ವರ್ಷಗಳ ನಿರಂತರ ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್

5 ವರ್ಷಗಳ ಲೈಂಗಿಕ ಸಂಬಂಧದ ನಂತರ ಅತ್ಯಾಚಾರ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪದ ವ್ಯಕ್ತಿಯ ವಿರುದ್ಧದ ಆರೋಪವನ್ನು ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 5 ವರ್ಷಗಳ ಲೈಂಗಿಕ ಸಂಬಂಧದ ನಂತರ ಅತ್ಯಾಚಾರ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪದ ವ್ಯಕ್ತಿಯ ವಿರುದ್ಧದ ಆರೋಪವನ್ನು ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

5 ವರ್ಷಗಳ ಕಾಲ ಪರಸ್ಪರ ಪ್ರೇಮಿಸಿದ್ದ ಜೋಡಿಗಳು, ಉಭಯ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧವನ್ನೂ ಹೊಂದಿದ್ದರು. ಆದರೆ, ಈಗ ತನ್ನ ಪ್ರಿಯಕರ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಯುವತಿ ಆತನ ವಿರುದ್ಧ ಅತ್ಯಾಚಾರ ಹಾಗೂ ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು.

ಇದರಂತೆ ಬೆಂಗಳೂರಿನ ವ್ಯಕ್ತಿ 53ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಪ್ರಶ್ನಿಸಿದ್ದರು. ಅಲ್ಲದೆ, ತಾವು ಮತ್ತು ದೂರುದಾರರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಮದುವೆಯಾಗಲು ಬಯಸಿದ್ದೆವು. ಆದರೆ, ಬೇರೆ ಜಾತಿ ಹಿನ್ನೆಲೆ ಮದುವೆ ಸಾದ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.    

ಈ ಪ್ರಕರಣವನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, 5 ವರ್ಷಗಳ ಕಾಲ ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯ ಇಷ್ಟದ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆದಿದೆ ಎನ್ನಲಾಗದು, ಇದನ್ನು ಅತ್ಯಾಚಾರ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೇಳಿದೆ.

ಪ್ರಕರಣ ಸಂಬಂಧ ತೀರ್ಪು ನೀಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಜೋಡಿ ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಅಲ್ಲ. ಕೆಲವು ದಿನ ಅಥವಾ ತಿಂಗಳ ಮಟ್ಟಿಗೂ ಅಲ್ಲ. ಅವರೇ ಹೇಳುವಂತೆ 5 ವರ್ಷಗಳಿಂದ ಲೈಂಗಿಕ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಮಹಿಳೆಯ ಸಮ್ಮತಿ ಇಲ್ಲದೆ ಈ ಸಂಬಂಧ ಏರ್ಪಟ್ಟಿದೆ ಎಂದು ಹೇಳಲಾಗದು.ಮಹಿಳೆಯೊಬ್ಬರ ಸಮ್ಮತಿ ಇಲ್ಲದೆ ಸುದೀರ್ಘ 5 ವರ್ಷಗಳ ಕಾಲ ಲೈಂಗಿಕ ಸಂಬಂಧ ಹೊಂದಿರಲು ಸಾಧ್ಯವಿಲ್ಲ. ಇದು ಇವರಿಬ್ಬರ ನಡುವಣ ಬಾಂಧವ್ಯದ ವಿಚಾರ. ಸುದೀರ್ಘ ಅವಧಿವರೆಗೆ ಇಬ್ಬರೂ ಜೊತೆಯಲ್ಲಿ ಇದ್ದಾರೆ. ಹೀಗಾಗಿ, ಐಪಿಸಿ ಸೆಕ್ಷನ್ 375 ಹಾಗೂ 376ರ ಅಡಿ ಈ ಪ್ರಕರಣವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.

ಅಲ್ಲದೆ, ಆರೋಪಿ ಮತ್ತು ದೂರುದಾರರ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಎಂದ ಮಾತ್ರಕ್ಕೆ ಐಪಿಸಿಯ ಸೆಕ್ಷನ್ 406 ರ ಅಡಿಯಲ್ಲಿ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಅಂಶವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೂ ಸೆಕ್ಷನ್ 323 ಮತ್ತು ಸೆಕ್ಷನ್ 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಪರಾಧಗಳಿಗಾಗಿ ವ್ಯಕ್ತಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸೆಕ್ಷನ್ 375 ಅಂದರೆ ಒಪ್ಪಿಗೆಯಿಲ್ಲದೆ ಮತ್ತು ಮಹಿಳೆಯ ಒಪ್ಪಿಗೆಯ ವಿರುದ್ಧ ಲೈಂಗಿಕ ಸಂಭೋಗವನ್ನು ಅತ್ಯಾಚಾರ ಎಂದು ಪರಿಗಣಿಸುತ್ತದೆ. ಆದರೆ, ಸೆಕ್ಷನ್ 376 ಅಂದರೆ ಅತ್ಯಾಚಾರಕ್ಕೆ ಶಿಕ್ಷೆಯನ್ನು ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com