ಮಂಗಳೂರು: ಭಾರತದ ಕೆಲವೇ ಆದಿವಾಸಿ ಬುಡಕಟ್ಟುಗಳಲ್ಲಿ ಕೊರಗ ಸಮುದಾಯ ಕೂಡ ಒಂದಾಗಿದೆ. ಈ ಸಮುದಾಯ ತನ್ನದೇ ಆದ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದು, ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ಈ ಮೂಲಕ ಶಾಂತಿಯನ್ನು ಕಾಪಾಡುವ ಕೆಲಸವನ್ನು ಮಾಡುತ್ತಿದೆ.
2008ರಲ್ಲಿ ನಮ್ಮ ನ್ಯಾಯ ಕೂಟ ಎಂದು ನ್ಯಾಯಾಂಗ ವ್ಯವಸ್ಥೆಯನ್ನು ಈ ಸಮುದಾಯ ಸ್ಥಾಪಿಸಿಕೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ 117 ವಿವಾದಗಳನ್ನು ಇತ್ಯರ್ಥಪಡಿಸಿದೆ.
ಈ ವ್ಯವಸ್ಥೆಯು ಮುಖ್ಯ ನ್ಯಾಯಾಧೀಶರು ಮತ್ತು "ಪಂಚರು" (ವಕೀಲರು) ಸೇರಿದಂತೆ ಐದು ಸದಸ್ಯರ ತೀರ್ಪುಗಾರರನ್ನು ಒಳಗೊಂಡಿದೆ. ನ್ಯಾಯಾಲಯವು ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಪ್ರಕರಣಗಳನ್ನು ಮೊದಲು ತೀರ್ಪುಗಾರರ ಸದಸ್ಯರ ಮುಂದೆ ತರಲಾಗುತ್ತದೆ. ಇವರು ತನಿಖೆ ನಡೆಸುತ್ತಾರೆ.
“ನಮ್ಮ ನ್ಯಾಯ ಕೂಟ”ದ ತೀರ್ಪುಗಾರರಾದ ಮತಾಡಿ ಕಾಯರ್ಪಲ್ಕೆ ಮಾತನಾಡಿ, “ಹಲವು ಕೊರಗರು ಆರ್ಥಿಕವಾಗಿ ಹಿಂದುಳಿದಿದ್ದು, ಕಾನೂನು ಪ್ರಕ್ರಿಯೆಗಳು ದೀರ್ಘ ಮತ್ತು ಸಮಯ ತೆಗೆದುಕೊಳ್ಳುವುದರಿಂದ ನ್ಯಾಯಾಲಯದ ಮೊಕದ್ದಮೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ವಾರ ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಎರಡು ವೈವಾಹಿಕ ವಿವಾದಗಳ ಪೈಕಿ ಒಂದು ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ನಮ್ಮ ನ್ಯಾಯ ಕೂಟವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿಎಚ್‌ಡಿ ಪದವಿ ಪಡೆದ ಸಮುದಾಯದ ಪ್ರಥಮ ಮಹಿಳೆ ಸಬಿತಾ ಕೊರಗ ಮಾತನಾಡಿ, “ನಮ್ಮ ನ್ಯಾಯ ಕೂಟ”ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಸಮಗ್ರ ಗ್ರಾಮೀಣ ಆಶ್ರಮ, ಕೊರಗರು ಸೇರಿದಂತೆ ಸ್ಥಳೀಯ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಅಶೋಕ್ ಶೆಟ್ಟಿ ಅವರು ಮಾತನಾಡಿ “ನಮ್ಮ ನ್ಯಾಯ ಕೂಟ” ಗುರಿಕಾರ ವ್ಯವಸ್ಥೆಯನ್ನು ಆಧರಿಸಿದೆ, 2008ರಲ್ಲಿ ನಮ್ಮ ನ್ಯಾಯ ಕೂಟ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದ್ದರು. 2010ರಲ್ಲಿ ಔಪಚಾರಿಕ ಪ್ರಕ್ರಿಯೆಗಳು ಆರಂಭವಾಗಿದವು. ಕೌಟುಂಬಿಕ ಹಿಂಸೆ ಮತ್ತು ಭೂಮಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳು ಬರುತ್ತಿದ್ದವು. ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗದ ಪ್ರಕರಣಗಳನ್ನು ಇಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ನಮ್ಮ ನ್ಯಾಯ ಕೂಟಕ್ಕೆ ಬಂದ ಪ್ರಕರಣವೊಂದನ್ನು ಇತ್ಯರ್ಥಪಡಿಸಿದ್ದನ್ನು ಅಶೋಕ್ ಅವರು ವಿವರಿಸಿದರು.
ಕೊಲ್ಲೂರು ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ಮೊದಲ ಪತ್ನಿ ತೀರಿಕೊಂಡಾಗ ಎರಡನೇ ವಿವಾಹವಾಗಿದ್ದಾರೆ. ಆದರೆ, ಎರಡನೇ ಪತ್ನಿಗೆ ವಿಚ್ಛೇದನ ನೀಡದೆಯೇ ಮೂರನೇ ಮದುವೆಯಾಗಿದ್ದರು. ಮಹಿಳಿಗೆ ಇದು ಮೊದಲ ಮದುವೆಯಾಗಿದ್ದು, ಗರ್ಭಿಣಿಯಾದ ಬಳಿಕ ವ್ಯಕ್ತಿ ಈಕೆಯನ್ನು ತೊರೆದಿದ್ದ. ಬಳಿಕ ಮಹಿಳೆ ನಮ್ಮ ನ್ಯಾಯ ಕೂಟವನ್ನು ಸಂಪರ್ಕಿಸಿದ್ದರು. ಇದೀಗ ವ್ಯಕ್ತಿಗೆ ಪ್ರತಿ ತಿಂಗಳು ನ್ಯಾಯಾಲಯಕ್ಕೆ ರೂ.1,000 ಪಾವತಿಸುವಂತೆ ಆದೇಶಿಸಲಾಗಿದೆ. ಹಣವನ್ನು ಮಹಿಳೆಯ ಖಾತೆಗೆ ವರ್ಗಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement