ಮಾ. 29ರಿಂದ ಏ.8ರವರೆಗೆ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ

11 ದಿನಗಳ ವಾರ್ಷಿಕ ಬೆಂಗಳೂರು ಕರಗ ಉತ್ಸವವು ಮಾರ್ಚ್ 29 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್8ರವರೆಗೂ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 11 ದಿನಗಳ ವಾರ್ಷಿಕ ಬೆಂಗಳೂರು ಕರಗ ಉತ್ಸವವು ಮಾರ್ಚ್ 29 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್8ರವರೆಗೂ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.

ಈ ವರ್ಷದ ಕರಗ ಉತ್ಸವಕ್ಕೆ 75 ಲಕ್ಷ ರೂ.ಗೆ ಮಂಜೂರಾತಿ ಮಾಡುವುದಾಗಿ ಹಾಗೂ ರೂ.40 ಲಕ್ಷ ಮುಂಗಡ ಹಣ ಬಿಡುಗಡೆ ಮಾಡುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕೆ.ಸತೀಶ್‌, ಶಾಸಕ ಉದಯ್‌ ಗರುಡಾಚಾರ್‌ ಪಾಲ್ಗೊಂಡು ಕಾರ್ಯಕ್ರಮದ ವೇಳಾಪಟ್ಟಿಯೊಂದಿಗೆ ಬೆಂಗಳೂರು ಕರಗ ಪೋಸ್ಟರ್‌ ಬಿಡುಗಡೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್‌ ಗಿರಿನಾಥ್ ಅವರು, ಮಾ.29ರಿಂದ ರಥೋತ್ಸವ ಧ್ವಜಾರೋಹಣ ಮಾಡುವ ಮೂಲಕ ಕರಗ ಉತ್ಸವ ಆರಂಭವಾಗಲಿದೆ. ಏಪ್ರಿಲ್ 6ರಂದು ರಾತ್ರಿ ಮುಖ್ಯ ಕರಗ ನಡೆಯಲಿದೆ. ಬೇಸಿಗೆಯಲ್ಲಿ ಹಬ್ಬ ಇರುವುದರಿಂದ ಈ ಬಾರಿ ಎಲ್ಲ ಭಕ್ತರಿಗೆ ಹಣ್ಣು ಹಂಪಲು ವಿತರಿಸಲು ಬಿಬಿಎಂಪಿಗೆ ಹಣ ಮಂಜೂರು ಮಾಡುವಂತೆ ಧರ್ಮರಾಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಹಣದಲ್ಲಿ ಕರಗ ವೀಕ್ಷಿಸಲು ಬರುವ ಸುಮಾರು 5 ಸಾವಿರ ವೀರಕುಮಾರ, ವಣಿಕುಲ ಕ್ಷತ್ರಿಯ ಸಮುದಾಯ ಹಾಗೂ ಸಾರ್ವಜನಿಕರಿಗೆ ಹಣ್ಣು ಹಂಪಲು ನೀಡುತ್ತೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರಿಂದ ಉತ್ಸವದ ಸಂದರ್ಭದಲ್ಲಿ ಯಾವುದೇ ರಾಜಕೀಯ ಬ್ಯಾನರ್‌ಗಳನ್ನು ಹಾಕಲಾಗುವುದಿಲ್ಲ ಎಂದು ಧರ್ಮರಾಯಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕೆ.ಸತೀಶ್‌ ಅವರು ಹೇಳಿದ್ದಾರೆ.

ಕರಗ ಉತ್ಸವ ನಡೆಯುವುದರೊಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಬೆಂಗಳೂರು ಕರಗಕ್ಕೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಕರಗ ಉತ್ಸವ ಶಾಂತಿಯುತವಾಗಿ ನಡೆಯಲಿದ್ದು, ಕರಗವು ಕಾಟನ್‌ಪೇಟೆಯ ಹಜರತ್‌ ತವಕ್ಕಲ್‌ ಮಸ್ತಾನ್‌ ಸಾಹೇಬ್‌ ದರ್ಗಾದಲ್ಲಿ ಮುಂಜಾನೆ ಸ್ವಲ್ಪ ಕಾಲ ನಿಲ್ಲಲಿದೆ ಎಂದು ಗರುಡಾಚಾರ್‌ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com