ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಹೆಸರು ವಿವಾದ; ವಿರೋಧ, ಟೀಕೆ ಬೆನ್ನಲ್ಲೇ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಮೊಸರು ಪ್ಯಾಕೆಟ್‌ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ ಬೆನ್ನಲ್ಲೇ, ಯೂಟರ್ನ್ ಹೊಡೆದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಗುರುವಾರ ಹಿಂಪಡೆದುಕೊಂಡಿದೆ.
Published on

ಚೆನ್ನೈ/ಬೆಂಗಳೂರು: ಮೊಸರು ಪ್ಯಾಕೆಟ್‌ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ ಬೆನ್ನಲ್ಲೇ, ಯೂಟರ್ನ್ ಹೊಡೆದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಗುರುವಾರ ಹಿಂಪಡೆದುಕೊಂಡಿದೆ.

ಮೊಸರು ಪ್ಯಾಕೆಟ್ ಮೇಲೆ ಹಿಂದಿ ಪದ ದಹಿ ಎಂಬ ಹೆಸರು ನಮೂದಿಸುವುದಕ್ಕೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್‌ ಹಾಗೂ ಹಲವು ಕನ್ನಡ ಸಂಘಟನೆಗಳು ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದವು.

ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಗುರುವಾರ ತನ್ನ ಆದೇಶವನ್ನು ಪರಿಷ್ಕರಿಸಿದ್ದು, ಪ್ರಾದೇಶಿಕ ಭಾಷೆಗಳನ್ನು ಪ್ಯಾಕೆಟ್‌ ಮೇಲೆ ಮುದ್ರಿಸಲು ಅವಕಾಶ ಕಲ್ಪಿಸಿದೆ. ಇಂಗ್ಲಿಷ್‌ ಜತೆ ಯಾವುದೇ ಪ್ರಾದೇಶಿಕ ಭಾಷೆಯನ್ನು ಬಳಸಬಹುದು ಎಂದು ಹೇಳಿದೆ.

ಉದಾಹರಣೆಗೆ ಇಂಗ್ಲಿಷ್‌ನಲ್ಲಿ curd ಜತೆ ಹಿಂದಿಯಲ್ಲಿ ದಹಿ, ಕನ್ನಡದಲ್ಲಿ ಮೊಸರು, ತಮಿಳಿನಲ್ಲಿ ಥೈರ್, ತೆಲುಗಿನಲ್ಲಿ ಪೆರುಗು ಎಂದು ಆವರಣದಲ್ಲಿ ಬಳಸಬಹುದು ಎಂದು ಹೇಳಿದೆ.

ಮಾರ್ಚ್‌ 10ರಂದು ನಿರ್ದೇಶನ ನೀಡಿದ್ದ ಎಫ್‌ಎಸ್‌ಎಸ್‌ಎಐ, ‘ದಹಿ’ ಎನ್ನುವ ಶಬ್ದವನ್ನೇ ಬಳಸಬೇಕು. ಆವರಣದಲ್ಲಿ ಮಾತ್ರ ಪ್ರಾದೇಶಿಕ ಭಾಷೆಯನ್ನು ನಮೂದಿಸುವಂತೆ ಸೂಚಿಸಿತ್ತು.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ಹಾಗೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಹಾಲು ಒಕ್ಕೂಟಗಳಿಗೆ (ಬಮುಲ್‌) ಹಾಗೂ ತಮಿಳುನಾಡು ಸಹಕಾರ ಹಾಲು ಒಕ್ಕೂಟ ಮತ್ತು ಹ್ಯಾಟ್ಸನ್‌ ಆಗ್ರೊ ಪ್ರಾಡಕ್ಟ್ಸ್‌ ಸಂಸ್ಥೆಗಳಿಗೆ ಈ ಬಗ್ಗೆ ನಿರ್ದೇಶನವನ್ನು ನೀಡಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಸಹಕಾರ ಹಾಲು ಉತ್ಪಾದಕರ ಒಕ್ಕೂಟವು ಹಿಂದಿಯ ’ದಹಿ’ ಶಬ್ದ ಬಳಸುವುದಿಲ್ಲ. ತಮಿಳು ಶಬ್ದ ‘ಥಯಿರ್‌’ ಮಾತ್ರ ಬಳಸುವುದಾಗಿ ತಿಳಿಸಿತ್ತು.

‘ಎಫ್‌ಎಸ್‌ಎಸ್‌ಎಐ ನಿರ್ದೇಶನ ಪಾಲಿಸುವುದಿಲ್ಲ. ನಮ್ಮ ರಾಜ್ಯಗಳಲ್ಲೇ ತಮಿಳು ಮತ್ತು ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಬಳಸುವಂತೆ ಬಲವಂತದ ನಿರ್ದೇಶನ ನೀಡಲಾಗುತ್ತಿದೆ. ಇಂತಹ ನಿರ್ದೇಶನ ನೀಡಲು ಜವಾಬ್ದಾರಿಯಾಗಿರುವವರನ್ನು ಶಾಶ್ವತವಾಗಿಯೇ ದಕ್ಷಿಣದಿಂದ ನಿಷೇಧಿಸಲಾಗುವುದು’ ಎಂದು ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬುಧವಾರ ಕಟುವಾಗಿ ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com