ರಾಜ್ಯ ವಿಧಾನಸಭಾ ಚುನಾವಣೆ: ಮೀಸಲಾತಿ ಮಿತಿ ಶೇ.75ರಷ್ಟು ಏರಿಕೆ ಮಾಡುವ ಕಾಂಗ್ರೆಸ್ ಭರವಸೆಗೆ ಕಾನೂನು ತೊಡಕು- ತಜ್ಞರು

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಾಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ, ಶೇ.50ರಷ್ಟಿರುವ ಮೀಸಲಾತಿ ಮಿತಿಯನ್ನು 75ಕ್ಕೆ ಹೆಚ್ಚಿಸುವ ಭರವಸೆಯನ್ನು ನೀಡಿದೆ. ಆದರೆ, ಈ ಭರವಸೆಗೆ ಕಾನೂನು ತೊಡಕುಗಳು ಎದುರಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ/ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಾಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ, ಶೇ.50ರಷ್ಟಿರುವ ಮೀಸಲಾತಿ ಮಿತಿಯನ್ನು 75ಕ್ಕೆ ಹೆಚ್ಚಿಸುವ ಭರವಸೆಯನ್ನು ನೀಡಿದೆ. ಆದರೆ, ಈ ಭರವಸೆಗೆ ಕಾನೂನು ತೊಡಕುಗಳು ಎದುರಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಹಿಂದುಳಿದ ವರ್ಗ (ಬಿಸಿ) ಮುಸ್ಲಿಮರಿಗೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದು, ಈ ಮೀಸಲಾತಿ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಮಂಗಳವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಎಸ್‌ಸಿಗಳ ಮೀಸಲಾತಿಯನ್ನು ಶೇಕಡಾ 15 ರಿಂದ 17 ಕ್ಕೆ ಮತ್ತು ಎಸ್‌ಟಿಗಳ ಮೀಸಲಾತಿಯನ್ನು ಶೇಕಡಾ 3 ರಿಂದ ಶೇಕಡಾ 7 ಕ್ಕೆ ಹೆಚ್ಚಿಸುವುದಾಗಿ ಪ್ರಸ್ತಾಪಿಸಿದೆ. ಅಲ್ಲದೆ, ಲಿಂಗಾಯತರು ಮತ್ತು ಒಕ್ಕಲಿಗರು ಮತ್ತು ಇತರ ಸಮುದಾಯಗಳಿಗೆ ಮೀಸಲಾತಿಯನ್ನು ಶೇ.50 ರಿಂದ 75ಕ್ಕೆ ಏರಿಸುವುದಾಗಿ ಹೇಳಿದೆ.

ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ರದ್ದುಪಡಿಸಿರುವ ಶೇ.4ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದೆ.

1992ರ ತೀರ್ಪಿನಲ್ಲಿ ದೇಶದ ಮೀಸಲಾತಿ ಗರಿಷ್ಠ ಮಿತಿ ಶೇ.50ಕ್ಕಿಂತ ಮೀರಬಾರದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ಇಡೀ ದೇಶದಲ್ಲೇ ಅತೀ ಹೆಚ್ಚು ಮೀಸಲಾತಿ ಹೊಂದಿರುವ ರಾಜ್ಯ ತಮಿಳುನಾಡು. ಇಲ್ಲಿ ಶೇ.69ರಷ್ಟು ಮೀಸಲಾತಿ ಇದ್ದರೆ ಉಳಿದೆಡೆ ಶೇ.50ರಷ್ಟು ಮೀಸಲಾತಿ ಇದೆ. 1992ರ ಮಂಡಲ್‌ ತೀರ್ಪನ್ನು ಆಧಾರವಾಗಿಟ್ಟುಕೊಂಡು ಈ ಮೀಸಲಾತಿ ನೀಡಲಾಗಿತ್ತು.  ಸುಪ್ರೀಂ ಕೋರ್ಟ್‌ನಲ್ಲಿ ಸೋಲಾದ ಮೇಲೆ ಜಯಲಲಿತಾ ಅವರು ವಿಶೇಷ ವಿಧಾನಸಭೆ ಅಧಿವೇಶನ ಕರೆದರು. ಆಗ ಆಡಳಿತ ಮತ್ತು ವಿಪಕ್ಷಗಳು ಒಂದಾಗಿ ಶೇ.69ರಷ್ಟು ಮೀಸಲಾತಿ ಯನ್ನೇ ಮುಂದುವರಿಸಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ಹೊಸದಾಗಿ ಕಾಯ್ದೆ ಯೊಂದನ್ನು ಮಾಡಲಾಯಿತು. ಇದಕ್ಕೆ ರಾಷ್ಟ್ರಪತಿ ಗಳಿಂದ ಒಪ್ಪಿಗೆಯೂ ಸಿಕ್ಕಿತು. ಜಯಲಲಿತಾ ಅವರ ಲಾಬಿಯಿಂದಾಗಿ ಸಂಸತ್‌ನಲ್ಲಿ ಶೆಡ್ನೂಲ್‌ 9ಕ್ಕೆ ತಿದ್ದುಪಡಿ ತಂದು ವಿಶೇಷ ಪರಿಸ್ಥಿತಿಯಲ್ಲಿ ಶೇ.69ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ಸಿಕ್ಕಿತು. ಅಲ್ಲದೆ ಇದನ್ನು ಕೋರ್ಟ್‌ನಲ್ಲಿ ಯಾರೂ ಪ್ರಶ್ನಿಸದಂತೆ ನೋಡಿಕೊಳ್ಳಲಾಯಿತು. ಈ ಕುರಿತು ಸುಪ್ರೀಂಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹೀಗಾಗಿ ತಮಿಳುನಾಡು ಸರ್ಕಾರದ ಮಾರ್ಗವನ್ನೇ ಅನುಸರಿಸುವುದಾಗಿ ರಾಜ್ಯ ಕಾಂಗ್ರೆಸ್ ಹೇಳುತ್ತಿದೆ. ಆದರೆ, ಇದಕ್ಕೆ ಕಾನೂನು ತೊಡಕುಗಳು ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ 2021ರಲ್ಲಿ ಮರಾಠಿಗರಿಗೆ ಮೀಸಲಾತಿ ಒದಗಿಸಲು ಶೇ.50ರಷ್ಟು ಮೀಸಲಾತಿ ಮಿತಿಯನ್ನು ಹೆಚ್ಚಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಅಸಂವಿದಾನಿಕ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಎಂದು ಹೇಳುವ ಮೂಲಕ ತಜ್ಞರು ಗಮನ ಸೆಳೆದಿದ್ದಾರೆ.

ಇತ್ತೀಚೆಗೆಷ್ಟೇ ಕರ್ನಾಟಕದಲ್ಲಿ ಜಾತಿ ಮೀಸಲಾತಿ ಹೋರಾಟಗಳೇ ಸದ್ದು ಮಾಡಿದ್ದವು. ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳುಸೇರಿ ಹಲವು ಸಮುದಾಯಗಳು ಮೀಸಲಾತಿ ವಿಚಾರವಾಗಿ ಬೀದಿಗಿಳಿದಿದ್ದವು. ಎಸ್‌ಸಿ/ಎಸ್‌ಟಿ ಸಮುದಾಯಗಳು ಕೂಡ ಮೀಸಲು ಹೆಚ್ಚಳಕ್ಕೆ ಹೋರಾಟ ಮಾಡಿ ಭಾಗಶಃ ಯಶಸ್ವಿಯಾಗಿವೆ. ಸಾಲು ಸಾಲು ಮೀಸಲಾತಿ ಹೋರಾಟಗಳಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದರ ಮಧ್ಯೆ ಇದೀಗ ಕಾಂಗ್ರೆಸ್, ಈ ವಿಧಾನಸಭೆ ಚುನಾವಣೆಯಲ್ಲಿ ಈ ಮೂಲಕ ಕಾಂಗ್ರೆಸ್​ ಈ ಬಾರಿಯ ಚುನಾವಣೆಗೆ ಮೀಸಲಾತಿ ಅಸ್ತ್ರ ಪ್ರಯೋಗಿಸಿದೆ.

ಶೇ.50ರಷ್ಟು ಮೀಸಲು ಹೆಚ್ಚಿಸಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಇದಕ್ಕಾಗಿ ಸಂಸತ್‌ನ ಎರಡು ಸದನಗಳಲ್ಲಿ ಮಸೂದೆ ಪಾಸ್‌ ಮಾಡಿಕೊಂಡು ಬಳಿಕ, ಶೇ.50ಕ್ಕೂ ಹೆಚ್ಚು ರಾಜ್ಯಗಳು ಒಪ್ಪಿಗೆ ಸೂಚಿಸಬೇಕಿದೆ. ಬಳಿಕ ರಾಷ್ಟ್ರಪತಿಗಳ ಅಂಕಿತ ಬೇಕು. ಇಷ್ಟೊಂದು ಸಂಕೀರ್ಣ ಪ್ರಕ್ರಿಯೆ ಮುಗಿದ ಬಳಿಕ ಸಂವಿಧಾನದ ತಿದ್ದುಪಡಿಯಾಗಿ ಮೀಸಲಾತಿ ಹೆಚ್ಚಳವಾಗುತ್ತದೆ.

ಇನ್ನು ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಎಷ್ಟಿದೆ ಎನ್ನುವುದನ್ನು ನೋಡುವುದಾದರೆ ಕರ್ನಾಟಕ – 50, ಮಹಾರಾಷ್ಟ್ರ – 73, ತಮಿಳುನಾಡು – 69. ತೆಲಂಗಾಣ – 62. ಕೇರಳ – 50. ಆಂಧ್ರ ಪ್ರದೇಶ – 50ರಷ್ಟು ಒಟ್ಟು ಮೀಸಲಾತಿ ಇದೆ.

ಮೀಸಲು ಪ್ರಮಾಣ ಶೇ.50 ಅನ್ನು ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಕಟ್ಟಪ್ಪಣೆ ಇರುವುದರಿಂದ ಸರ್ಕಾರಗಳು ಶೇ.50ರಷ್ಟು ಮೀಸಲಾತಿಯಲ್ಲೇ ಎಲ್ಲ ಸಮುದಾಯಗಳ ಬೇಡಿಕೆಯನ್ನು ಈಡೇರಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಒಂದು ಸಮುದಾಯದ ಮೀಸಲಾತಿ ಹೆಚ್ಚಿಸಿದರೆ ಮತ್ತೊಂದು ಜಾತಿಯ ಮೀಸಲು ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ಆಡಳಿತರೂಢ ಬಿಜೆಪಿ ಸರ್ಕಾರ ಕೆಲ ಸಮುದಾಯಗಳ ಮೀಸಲಾತಿಯಲ್ಲಿ ಬದಲಾವಣೆ ಮಾಡಿತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇನ್ನು ಅಲ್ಪ ಸಂಖ್ಯಾತರಿಗೆ ಈ ಹಿಂದೆ 2ಬಿಯಡಿ ನೀಡುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿಸಲು ನಿರ್ಧರಿಸಲಾಗಿತ್ತು. ಒಕ್ಕಲಿಗ ಸಮುದಾಯಕ್ಕೆ ಮತ್ತು ಲಿಂಗಾಯಿತರಿಗೆ 2ಸಿ ಮತ್ತು 2ಡಿಯಡಿ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 4ರಿಂದ 6ಕ್ಕೆ ಹಾಗೂ ಶೇಕಡ 5ರಿಂದ 7ಕ್ಕೆ ಏರಿಕೆ ಮಾಡಲಾಗಿದ್ದು, ಈ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com