ರಾಜಕಾರಣಿ ಹೆಸರಿನಲ್ಲಿ 3 ಕೆಜಿ 653 ಗ್ರಾಂ ಚಿನ್ನ, 85 ಲಕ್ಷ ರೂ ಸುಲಿಗೆ: ಸಿಟಿ ಮಾರುಕಟ್ಟೆಯಲ್ಲಿ ಪ್ರಕರಣ

ವಿಧಾನಸಭೆ ಚುನಾವಣೆಯನ್ನು ತಮ್ಮ ದುರುಪಯೋಗಕ್ಕೆ ಬಳಸಿಕೊಂಡಿರುವ ಒಂದು ಗ್ಯಾಂಗ್ ಚಿನ್ನದ ವ್ಯಾಪಾರಿಯಿಂದ ಬರೊಬ್ಬರಿ  3ಕೆಜಿ 653 ಗ್ರಾಂ ಚಿನ್ನ, 85 ಲಕ್ಷ ರೂ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಯನ್ನು ತಮ್ಮ ದುರುಪಯೋಗಕ್ಕೆ ಬಳಸಿಕೊಂಡಿರುವ ಒಂದು ಗ್ಯಾಂಗ್ ಚಿನ್ನದ ವ್ಯಾಪಾರಿಯಿಂದ ಬರೊಬ್ಬರಿ  3 ಕೆಜಿ 653 ಗ್ರಾಂ ಚಿನ್ನ, 85 ಲಕ್ಷ ರೂ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಬರುವ ರಾಜಕೀಯ ಮುಖಂಡರಿಗೆ ಉಡುಗೊರೆ ನೀಡಲೆಂದು 3 ಕೆ.ಜಿ 653 ಗ್ರಾಂ ಚಿನ್ನಾಭರಣ ಪಡೆದು, ಅದನ್ನು ವಾಪಸು ಕೇಳಿದ್ದಕ್ಕೆ 85 ಲಕ್ಷ ರೂ ಸುಲಿಗೆ ಮಾಡಿರುವ ಬಗ್ಗೆ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, 'ನಗರದ ಸಿ.ಟಿ. ಸ್ಟ್ರೀಟ್‌ನಲ್ಲಿರುವ ಅರಿಹಂತ್ ಆಭರಣ ಮಳಿಗೆ ಮಾಲೀಕ ವಿಶಾಲ್ ಜೈನ್ ಅವರು ವಂಚನೆ ಬಗ್ಗೆ ದೂರು ನೀಡಿದ್ದು, ಅವರ ದೊಡ್ಡಪ್ಪನ ಮಗನ ಪತ್ನಿಯ ಸಂಬಂಧಿ ಅಭಯ್ ಜೈನ್ ಎಂಬಾತ ತನ್ನ ಸ್ನೇಹಿತರಾದ ಕಿರಣ್ ಪಗಾರಿಯಾ ಲೋಡಾ, ಸಂಕೇತ್, ನವೀನ್ ದನಿ, ಚರಣ್ ಹಾಗೂ ಇತರರೊಂದಿಗೆ ಸೇರಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ರಾಜಕಾರಣಿಗಳಿಗಾಗಿ ಚಿನ್ನ ಖರೀದಿ
‘ಅಭಯ್, ಕಿರಣ್ ಹಾಗೂ ನಿತಿನ್, ಫೆ.16 ರಂದು ವಿಶ್ವಾಸ್ ಅವರ ಆಭರಣ ಮಳಿಗೆಗೆ ಹೋಗಿದ್ದರು. ನಮಗೆಲ್ಲ ದೊಡ್ಡ ರಾಜಕಾರಣಿಗಳು ಪರಿಚಯವಿದ್ದಾರೆ. ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದು, ಪ್ರಚಾರಕ್ಕೆಂದು ಹೊರ ರಾಜ್ಯಗಳಿಂದ ಹಾಗೂ ಕೇಂದ್ರದಿಂದ ಮುಖಂಡರು ಕರ್ನಾಟಕಕ್ಕೆ ಬರಲಿದ್ದಾರೆ. ಅವರಿಗೆ ಉಡುಗೊರೆಯಾಗಿ ನೀಡಲು ಚಿನ್ನಾಭರಣಗಳು ಬೇಕಿವೆ. ನೀವು ಕೊಟ್ಟರೆ, ಹಣ ಕೊಡಿಸುತ್ತೇವೆ’ ಎಂದು ಅಭಯ್ ಹೇಳಿದ್ದ. ಆರೋಪಿಗಳ ಮಾತು ನಂಬಿದ್ದ ವಿಶ್ವಾಸ್, ಹಂತ ಹಂತವಾಗಿ 3 ಕೆ.ಜಿ 653 ಗ್ರಾಂ ಚಿನ್ನಾಭರಣ ನೀಡಿದ್ದರು. ಇದಾದ ನಂತರ, ಆರೋಪಿಗಳು ಹಣ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಲೆಂದು ಮೊಬೈಲ್ ಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಗಳನ್ನು ಪತ್ತೆ ಮಾಡಿದ್ದ ವಿಶ್ವಾಸ್, ‘ಹಣ ಕೊಡಿ. ಇಲ್ಲವಾದರೆ, ಆಭರಣ ವಾಪಸು ನೀಡಿ’ ಎಂದಿದ್ದರು. ರಾಜಕೀಯ ಮುಖಂಡರಿಗೆ ಚಿನ್ನಾಭರಣ ನೀಡಿರುವುದಾಗಿ ಹೇಳಿದ್ದ ಆರೋಪಿಗಳು, ‘ನಮ್ಮ ಪರಿಚಯಸ್ಥರೊಬ್ಬರ ಬಳಿ 8 ಕೆ.ಜಿ ಚಿನ್ನದ ಗಟ್ಟಿ ಇದೆ. ಅದನ್ನು ನಿಮಗೆ ಕೊಡಿಸುತ್ತೇವೆ. ನಾವು ನೀಡಬೇಕಿರುವ ಹಣ ಕಡಿತ ಮಾಡಿಕೊಂಡು, ಉಳಿದ 50 ಲಕ್ಷವನ್ನು ಆತನಿಗೆ ಕೊಟ್ಟು ಕಳುಹಿಸಿ’ ಎಂಬುದಾಗಿ ಆರೋಪಿಗಳು ಹೇಳಿದ್ದರು. ಆರೋಪಿಗಳ ಮಾತು ನಂಬಿದ್ದ ವಿಶ್ವಾಸ್, ಚಿನ್ನದ ಗಟ್ಟಿ ಇದೆ ಎನ್ನಲಾದ ಬ್ಯಾಗ್‌ ಪಡೆದು 50 ಲಕ್ಷ ನೀಡಿದ್ದರು. ಮಳಿಗೆಗೆ ಹೋಗಿ ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿ ಕಬ್ಬಿಣದ ತುಂಡುಗಳಿರುವುದು ಪತ್ತೆಯಾಗಿತ್ತು. ಪುನಃ ವಂಚನೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ವಿಶ್ವಾಸ್, ಚಿನ್ನಾಭರಣ ಹಾಗೂ ಹಣ ವಾಪಸು ನೀಡುವಂತೆ ಪಟ್ಟು ಹಿಡಿದಿದ್ದರು. ಜೊತೆಗೆ, ವಿ.ವಿ.ಪುರ ಠಾಣೆಗೂ ದೂರು ನೀಡಿದ್ದರು. 

ಅಭಯ್ ಜೈನ್ ಹಾಗೂ ಇತರರನ್ನು ಠಾಣೆಗೆ ಕರೆಸಿದ್ದ ಪೊಲೀಸರು, ವಿಚಾರಣೆ ಮಾಡಿದ್ದರು. ಹಣ ವಾಪಸು ಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ, ಆರೋಪಿಗಳು  ಹಣ ಕೊಟ್ಟಿರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದರು. ದೊಡ್ಡ ರಾಜಕಾರಣಿಗಳು ನಮ್ಮ ಜೊತೆಗಿದ್ದಾರೆ. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದಿದ್ದ ಆರೋಪಿಗಳು  ಮತ್ತೆ 30 ಲಕ್ಷ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com