

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಗ್ಯಾಸ್ ಸಿಲಿಂಡರ್'ಗೆ ಪೂಜೆ ಸಲ್ಲಿಸಿ, ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿನಲ್ಲಿ ಚಾಮುಂಡೇಶ್ವರೀ ದೇವಿ ದರ್ಶನ ಪಡೆದು ಬೆಂಗಳೂರಿಗೆ ವಾಪಸಾದ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಡಿಕೆ.ಶಿವಕುಮಾರ್ ಅವರು, ಅಡುಗೆ ಅನಿಲ ಸಿಲಿಂಡರ್‌ಗೆ ಪೂಜೆ ಸಲ್ಲಿಸಿದರು.
ಅಡುಗೆ ಅನಿಲದ ಬೆಲೆ ಗಗನಕ್ಕೇರಿರುವುದರಿಂದ ಗೃಹಿಣಿಯರ ಗಮನ ಸೆಳೆಯಲು ಡಿಕೆ.ಶಿವಕುಮಾರ್ ಅವರು ಗ್ಯಾಸ್ ಸಿಲಿಂಡರ್'ಗೆ ಪೂಜೆ ಸಲ್ಲಿಸಿದ್ದಾರೆ.
ಪಕ್ಷ ಕಚೇರಿಯಲ್ಲಿ ಸಿಲಿಂಡರ್‌ಗೆ ಕುಂಕುಮ, ಅರಿಶಿನವಿಟ್ಟು ಹೂವಿನ ಹಾರ ಹಾಕಿ ಊದುಬತ್ತಿ ಬೆಳಗಿ, ಕರ್ಪೂರ ಹಚ್ಚಿದ ಡಿಕೆ.ಶಿವಕುಮಾರ್ ಅವರು, ಸಿಲಿಂಡರ್'ಗೆ ನಮಸ್ಕರಿಸಿದರು.
ಈ ನಡುವ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಡಿಕೆ.ಶಿವಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂತ್'ನ ಹೊರಗೆ ಗ್ಯಾಸ್ ಸಿಲಿಂಡರ್ ಇಟ್ಟು ಹಾಕ ಹಾಕುವಂತೆ ಎಲ್ಲಾ ನಾಯಕರಿಗೂ ಸೂಚನೆ ನೀಡಲಾಗಿದೆ. ಮತಗಟ್ಟೆಗೆ ಬರುವ ಜನರು ದಯವಿಟ್ಟು ನಮ್ಮ ಗ್ಯಾಸ್ ಸಿಲಿಂಡರ್ ಗಳನ್ನು ನೋಡಿ ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಇಂದು ಯುವ ಮತದಾರರಿಗೆ ಉತ್ತಮ ಅವಕಾಶವಿದೆ... ಅವರು ಬದಲಾವಣೆಗಾಗಿ ಮತ ಹಾಕುತ್ತಾರೆಂಬ ವಿಶ್ವಾಸವಿದೆ. ರಾಜ್ಯದಲ್ಲಿನ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಅವರಿಗೆ ತಿಳಿದಿದೆ. ಹೀಗಾಗಿ ಅವರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಈ ಬದಲಾವಣೆಗಾಗಿ ನಮಗೆ 141 ಸ್ಥಾನಗಳನ್ನು ನೀಡುತ್ತಾರೆಂಬ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ವಿಷಯ ಪ್ರಮುಖವಾಗಿದೆ. ಈ ಬಾರಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.