ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆ: ಬಿಬಿಎಂಪಿ ನಡೆಗೆ ಹೊಯ್ಸಳ ನಗರ ನಿವಾಸಿಗಳು ಕಂಗಾಲು!

ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯುಡಿ) ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ಗುರುತಿಸಲು ಭೂಮಾಪಕರನ್ನು ಬಿಬಿಎಂಪಿ ನಿಯೋಜಿಸಿದ್ದು, ಈ ಬೆಳವಣಿಗೆ ಕೆಆರ್ ಪುರಂನ ಹೊಯ್ಸಳನಗರದ ನಿವಾಸಿಗಳು ಕಂಗಾಲಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯುಡಿ) ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ಗುರುತಿಸಲು ಭೂಮಾಪಕರನ್ನು ಬಿಬಿಎಂಪಿ ನಿಯೋಜಿಸಿದ್ದು, ಈ ಬೆಳವಣಿಗೆ ಕೆಆರ್ ಪುರಂನ ಹೊಯ್ಸಳನಗರದ ನಿವಾಸಿಗಳು ಕಂಗಾಲಾಗುವಂತೆ ಮಾಡಿದೆ.

ಕಳೆದ ವಾರವಷ್ಟೇ ಪೀಠೋಪಕರಣಗಳ ಗೋದಾಮು ಹಾಗೂ ಕೆಲವು ಮನೆಗಳ ಕಾಂಪೌಂಡ್ ಗೋಡೆಗಳನ್ನು ಬಿಬಿಎಂಪಿ ಕೆಡವಿತ್ತು.

ಬಿಬಿಎಂಪಿ ಕ್ರಮದಿಂದಾಗಿ ತಮ್ಮ ಮನೆಗಳ ಬಹುಭಾಗ ನೆಲಸಮವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದರೆ, ಪಾಲಿಕೆ ಎಂಜಿನಿಯರ್‌ಗಳು, ಭೂಮಾಪಕರು ಮತ್ತು ಮಳೆನೀರು ಚರಂಡಿ ಇಲಾಖೆಯ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿರುವುದಾಗಿ ಬಿಬಿಎಂಪಿ ತಿಳಿಸಿದೆ.

12 ವರ್ಷಗಳ ಹಿಂದೆ ನಿರ್ಮಿಸಿದ 40x60 ನಿವೇಶನದಲ್ಲಿ ಮನೆ ಹೊಂದಿರುವ ಗಿರೀಶ್ ಭಟ್ ಎಂಬುವವರು ಮಾತನಾಡಿ, ಬಿಬಿಎಂಪಿ ಕಾರ್ಯಾಚರಣೆಗೆ ಮುಂದಾದರೆ ತಮ್ಮ ಎರಡು ಅಂತಸ್ತಿನ ಕಟ್ಟಡದ 14 ಪಿಲ್ಲರ್‌ಗಳ ಪೈಕಿ ಕನಿಷ್ಠ 3 ಪಿಲ್ಲರ್‌ಗಳನ್ನು ನಾಶವಾಗಲಿದೆ. ಬಿಬಿಎಂಪಿ ಕಾರ್ಯಾಚರಣೆ ನಡೆಸಿದ್ದೇ ಆದರೆ, ಬಾಡಿಗೆದಾರರು ಮನೆ ಖಾಲಿ ಮಾಡುವಂತೆ ಸೂಚಿಸಬೇಕಾಗುತ್ತದೆ. ಅಲ್ಲದೆ, ಬಾಡಿಗೆ ಮನೆಗೆ ತೆರಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಆರ್ ಪುರಂನ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್ ಮಾತನಾಡಿ, ಭೂಮಾಪಕರು ಹಾಗೂ ಮಳೆನೀರು ಇಲಾಖೆ ಎಂಜಿನಿಯರ್ ಗಳ ಸೂಚನೆಯಂತೆ ನಾವು ಕ್ರಮ ಕೈಗೊಳ್ಳಬೇಕಾಗಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಯಂತ್ರೋಪಕರಣ ಹಾಗೂ ಮಾನವ ಶಕ್ತಿಯನ್ನು ಬಳಕೆ ಮಾಡಲಾಗುತ್ತಿದೆ. ಅಹಿತಕರ ಘಟನೆಗಳು ಎದುರಾಗಿದ್ದೇ ಆದರೆ, ಪೊಲೀಸರ ಸಹಕಾರ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಬಿಬಿಎಂಪಿಯ ಎಸ್‌ಡಬ್ಲ್ಯೂಡಿಗಳ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ಕಾರ್ಯಾಚರಣೆಯಲ್ಲಿ ಯಾವುದೇ ಅವ್ಯವಹಾರಗಳು ನಡೆಯುತ್ತಿಲ್ಲ. 1950 ಮತ್ತು 1960 ರ ದಶಕದ ಹಳೆಯ ಗ್ರಾಮ ನಕ್ಷೆಗಳ ಆಧಾರದ ಮೇಲೆ ಎಲ್ಲವನ್ನೂ ಮಾಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರಿಂದ ಕೆಲ ಮಾಲೀಕರು ಗುರುತುಗಳನ್ನು ಅಳಿಸಿಹಾಕಿರಬಹುದು. ಆದ್ದರಿಂದ, ಮತ್ತೆ ಆಸ್ತಿಗಳನ್ನು ಗುರುತಿಸುವ ಕಾರ್ಯವನ್ನು ಕೈಗೊಳ್ಳಲು ಭೂಮಾಪಕರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೊಯ್ಸಳನಗರದ ರಾಜಕಾಲುವೆಗಳಲ್ಲಿ 35 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಸೋಮವಾರದಿಂದ ನೆಲಸಮ ಕಾರ್ಯಾಚರಣೆ ತೀವ್ರಗೊಳ್ಳಲಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com