Zika Virus Found in Karnataka: ಚಿಕ್ಕಬಳ್ಳಾಪುರದಲ್ಲಿ ಮಾರಕ ಜಿಕಾ ವೈರಸ್ ಪತ್ತೆ; ರಾಜ್ಯಾದ್ಯಂತ ಆರೋಗ್ಯ ಇಲಾಖೆ ಹೈ ಅಲರ್ಟ್

ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಮಾರಕ ಜಿಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಹೊರಡಿಸಿದೆ.
ಜಿಕಾ ವೈರಸ್ (ಸಾಂದರ್ಭಿಕ ಚಿತ್ರ)
ಜಿಕಾ ವೈರಸ್ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಮಾರಕ ಜಿಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಹೊರಡಿಸಿದೆ.

ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಈಗ ಆಂದ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಅಪಾಯಕಾರಿ ಜಿಕಾ ವೈರಸ್ (Zika Virus) ಪತ್ತೆಯಾಗಿದೆ.

ಸೊಳ್ಳೆಗಳ ರಕ್ತದಲ್ಲಿ ಜಿಕಾ ವೈರಸ್ ಪತ್ತೆ ಹಿನ್ನಲೆ ಆರೋಗ್ಯ ಇಲಾಖೆ (Karnataka Health Department) ಹೈ ಅಲರ್ಟ್ ಘೋಷಿಸಿದೆ. ಜಿಲ್ಲೆಯ ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಸೇರಿದಂತೆ ವಿವಿದೆಡೆ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮೂಲಗಳ ಪ್ರಕಾರ ರಾಜ್ಯದ 68 ಕಡೆಗಳಲ್ಲಿ ಸೊಳ್ಳೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಮಾರಣಾಂತಿಕ ವೈರಸ್‌ ಇದೆಯೇ ಎಂದು ಪರಿಣತರು ಪರೀಕ್ಷೆ ನಡೆಸಿದ್ದರು. ಅದರಂತೆ ಚಿಕ್ಕಬಳ್ಳಾಪುರದ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷಿಸಲಾಗಿತ್ತು. ಸದ್ಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಮಾರಕ ವೈರಸ್‌ ಪತ್ತೆಯಾಗಿದೆ. ಮಾರಕ ವೈರಸ್‌ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷ ಸಭೆ ನಡೆಸಿ, ವೈರಸ್‌ ಹರಡದಂತೆ ತಡೆಯಬೇಕಾದ ಕ್ರಮಗಳ ಬಗ್ಗೆ ಚರ್ಚ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರ ಡಿಹೆಚ್​ಒ ಡಾ.ಮಹೇಶ್​ಕುಮಾರ್, ಅಕ್ಟೋಬರ್ 27ರಂದು ಸೊಳ್ಳೆಗಳಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಆದರೆ ಈವರೆಗೂ ಮನುಷ್ಯನ ರಕ್ತದಲ್ಲಿ ಜಿಕಾ ವೈರಸ್​ ಕಂಡು ಬಂದಿಲ್ಲ. ಪರೀಕ್ಷೆಗೆ ಮನುಷ್ಯರ ರಕ್ತದ ಮಾದರಿಯನ್ನು ಲ್ಯಾಬ್​ಗೆ ಕಳಿಸಲಾಗಿದೆ. ಮನುಷ್ಯರಲ್ಲಿ ಜಿಕಾ ವೈರಸ್ ಪತ್ತೆಯಾದರೆ ವೇಗವಾಗಿ ಹರಡುತ್ತದೆ. ಜಿಕಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದರು.

ಅಂತೆಯೇ ತಲಕಾಯಲಬೆಟ್ಟದ ಸುತ್ತಮುತ್ತ 5 ಗ್ರಾಮಗಳಿವೆ. 5 ಗ್ರಾಮಗಳಲ್ಲಿ ಸೊಳ್ಳೆಗಳ ನಾಶ, ಜನಜಾಗೃತಿ ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಸೊಳ್ಳೆ ಪತ್ತೆ ಹಾಗೂ ಜಾಗೃತಿ ಮೂಡಿಸುತ್ತಿದ್ದೇವೆ. 5 ಗ್ರಾಮದಲ್ಲಿ 40 ಜನ ಗರ್ಭಿಣಿಯರು ಇದ್ದಾರೆ. ಅದರಲ್ಲಿ 30 ಜನರನ್ನು ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಲಾಗಿದೆ. 3 ಜ್ವರ ಪ್ರಕರಣಗಳು ಕಂಡು ಬಂದಿವೆ. ಎಲ್ಲರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಕಾ ವೈರಸ್ ನಿಂದ ಪ್ರಾಣಾಪಾಯವಿಲ್ಲ. ಆದರೆ ಗರ್ಭಿಣಿಯರಿಗೆ ವೈರಸ್ ತಗುಲಿದ್ರೆ ಹುಟ್ಟುವ ಮಕ್ಕಳಿಗೆ ನರದೌರ್ಬಲ್ಯ ಆಗುತ್ತೆ. ಸದ್ಯಕ್ಕೆ ಜಿಕಾ ವೈರಸ್ ಗೆ ಸೂಕ್ತ ಚಿಕಿತ್ಸೆ ಇಲ್ಲ. ಸೊಳ್ಳೆ ಪರದೆ ಹಾಗೂ ಮೈತುಂಬ ಬಟ್ಟೆ ಬಳಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾತನಾಡಿ, ಈಗಾಗಲೇ ಸೋಂಕು ಪತ್ತೆಯಾದ ಭಾಗದಲ್ಲಿ ವೈದ್ಯರ ತಂಡ ಮುನ್ನೆಚ್ಚರಿಕೆ ವಹಿಸಿದೆ. ಜಿಕಾ ವೈರಸ್​ ಪತ್ತೆಯಾದ ಕಡೆ ಯಾವುದೇ ಹರಡುವಿಕೆಯಾಗಿಲ್ಲ. ಜಿಕಾ ವೈರಸ್ ಪತ್ತೆಯಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ನಿಗಾ ಇಡಲಾಗಿದೆ. ಮನೆ ಮನೆ ಸಮೀಕ್ಷೆ ಮಾಡಿ ರಕ್ತ ಸಂಗ್ರಹಕ್ಕೆ ಮುಂದಾಗಿದ್ದೇವೆ. ಜಿಕಾ ವೈರಸ್ ಹರದಡಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com