
ಮಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಗದೆ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಪರದಾಡುತ್ತಿದ್ದಾರೆ.
ಪೂನಂ ಎಂ (36) ಮಣ್ಣಗುಡ್ಡದ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರನ್ನು ತಂದೆ ಹಾಗೂ ಅಜ್ಜಿ ನೋಡಿಕೊಳ್ಳುತ್ತಿದ್ದರು. ಆದರೆ, ಮೂರು ವರ್ಷಗಳಿಂದ ಇಬ್ಬರೂ ಮೃತಪಟ್ಟಿದ್ದಾರೆ. ನಂತರ ಪೂನಂ ಅವರ ಊಟ, ವಸತಿಯನ್ನು ಚಿಕ್ಕಮ್ಮ ಹಾಗೂ ಚಿಕ್ಕಪ್ಪ ನೋಡಿಕೊಳ್ಳಲು ಪ್ರಾರಂಭಿಸಿದ್ದರು. ಆದರೆ, ಇಬ್ಬರಿಗೂ ವಯಸ್ಸಾದ ಕಾರಣ, ಇದೀಗ ಹೆಚ್ಚಿನ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಪೂನಂ ಅವರಿಗೆ ಅಂಗವಿಕಲರ ಪಿಂಚಣಿ ಮತ್ತು ಅನ್ನಭಾಗ್ಯ ಸೌಲಭ್ಯಗಳು ಬರುತ್ತಿದೆ. ಆದರೆ, ಆಕೆಯ ಬ್ಯಾಂಕ್ ಖಾತೆ ವಿವರ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕೆಲವು ದಾಖಲೆಗಳೊಂದಿಗೆ ಹಲವು ದಿನಗಳಿಂದಲೂ ಸರ್ಕಾರಿ ಕಚೇರಿ, ಬ್ಯಾಂಕ್ ಎಂದು ಸುತ್ತುತ್ತಲೇ ಇದ್ದಾರೆ.
ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನ ಪಡೆಯಲು ಮೊಬೈಲ್ ಸಂಖ್ಯೆ ಅಗತ್ಯವಿದ್ದು, ಹರಸಾಹಸ ಪಟ್ಟು ಕೆಲ ದಿನಗಳ ಹಿಂದಷ್ಟೇ ಹಿತೈಷಿಗಳ ಸಹಾಯದಿಂದ ಮೊಬೈಲ್ ಪಡೆದುಕೊಂಡಿದ್ದರು. ನಂತರ ಯೋಜನೆ ಪ್ರಯೋಜನ ಪಡೆಯಲು ಹೊಸ ಸಮಸ್ಯೆ ಶುರುವಾಗಿತ್ತು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ನಮೂದಿಸಿರುವ ಆಕೆಯ ಹೆಸರು ಹೊಂದಾಣಿಕೆಯಾಗುತ್ತಿರಲಿಲ್ಲ. ಮಂಗಳವಾರ, ಕೊನೆಗೂ ಈ ಸಮಸ್ಯೆ ಬಗೆಹರಿದಿದೆ. ಇದೀಗ ಗೃಹಲಕ್ಷ್ಮೀ ಯೋಜನೆ ಪಡೆಯಲು ಇಂಟರ್ನೆಟ್ ಸೆಂಟರ್'ಗೆ ಓಡಾಡುತ್ತಿದ್ದಾರೆ.
Advertisement