ರಾಜಧಾನಿಗೆ ಕುಡಿಯಲು 6 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಮೀಸಲು: ಬಳಕೆ ಕುರಿತು ಬಿಡಬ್ಲ್ಯೂಎಸ್‌ಎಸ್‌ಬಿ ಯೋಜನೆ

ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಹೆಚ್ಚುವರಿಯಾಗಿ ಆರು ಟಿಎಂಸಿ ಅಡಿ ಕಾವೇರಿ ನೀರನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದ್ದು, ಹೆಚ್ಚುವರಿ ನೀರನ್ನು ಬಳಕೆ ಮಾಡುವ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆ ರೂಪಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಹೆಚ್ಚುವರಿಯಾಗಿ ಆರು ಟಿಎಂಸಿ ಅಡಿ ಕಾವೇರಿ ನೀರನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದ್ದು, ಹೆಚ್ಚುವರಿ ನೀರನ್ನು ಬಳಕೆ ಮಾಡುವ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆ ರೂಪಿಸುತ್ತಿದೆ.

ಪ್ರಸ್ತುತ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 18 ಟಿಎಂಸಿ ಕಾವೇರಿ ನೀರನ್ನು ಬಳಸಿಕೊಳ್ಳುತ್ತಿದೆ. ಇದೀಗ ಹೆಚ್ಚುವರಿ ನೀರು ಹಂಚಿಕೆ ಆದೇಶದಿಂದ ನಗರಕ್ಕೆ 24 ಟಿಎಂಸಿ ಅಡಿ ಕಾವೇರಿ ನೀರು ಲಭ್ಯವಾಗಲಿದೆ.

ನಿನ್ನೆಯಷ್ಟೇ ದೆಹಲಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, 2018 ರಲ್ಲಿ ಸುಪ್ರೀಂಕೋರ್ಟ್ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ನಿಗದಿ ಮಾಡಿತ್ತು. ಆದರೆ ಇದುವರೆಗೂ ಯಾರೂ ಸಹ ಈ ವಿಚಾರವಾಗಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಮೊದಲು ಕಡಿಮೆ ನೀರು ನಿಗದಿ ಮಾಡಲಾಗಿತ್ತು. ಈಗ ಉಳಿಕೆ 6 ಟಿಎಂಸಿ ನೀರನ್ನು ಬಳಸಿಕೊಂಡು, ಒಟ್ಟಾರೆ ಕುಡಿಯುವ ಉದ್ದೇಶಕ್ಕೆ 24 ಟಿಎಂಸಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆಂದು ಹೇಳಿದರು.

ಬೆಂಗಳೂರಿಗೆ 24 ಟಿಎಂಸಿ ನೀರು ಬಳಕೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದರೆ ಎಂಬ ಪ್ರಶ್ನೆಗೆ ಉತ್ತರಿಸಿ, ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ಸುಪ್ರೀಂಕೋರ್ಟ್ ಕೊಟ್ಟಿರುವ ಆದೇಶವನ್ನು ಪಾಲಿಸುತ್ತಿದ್ದೇವೆ. ಅವರು ಏನಾದರೂ ಆಕ್ಷೇಪ ವ್ಯಕ್ತಪಡಿಸಲಿ, ನಮ್ಮ ಹಕ್ಕನ್ನು ನಾವೇಕೆ ಬಿಟ್ಟು ಕೊಡಬೇಕು. ಈ ಹಿಂದೆ ನೀಡಿರುವ ಆದೇಶವನ್ನೇ ಈಗ ಪಾಲಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಜೀವ ಕೊಟ್ಟಿದ್ದೇವೆ, ಕೆಆರ್ ಎಸ್ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ಇಷ್ಟು ಪ್ರಮಾಣದ ನೀರನ್ನು ನಾವು ಮೀಸಲಿರಿಸುತ್ತೇವೆ ಎಂದು ತಿಳಿಸಿದರು.

ನೀರು ಬಳಕೆಗೆ ಯೋಜನೆ ಸಿದ್ಧಪಡಿಸುತ್ತಿರುವ ಬಿಡಬ್ಲ್ಯೂಎಸ್‌ಎಸ್‌ಬಿ
ಆನೇಕಲ್, ಹಾರೋಹಳ್ಳಿ ಮತ್ತು ಬೆಂಗಳೂರು ಉತ್ತರ ಭಾಗಗಳು ವೇಗವಾಗಿ ಬೆಳೆಯುತ್ತಿವೆ. ಅವರಿಗೂ ನೀರು ಬೇಕು. ನಾವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ಒದಗಿಸುತ್ತಿದ್ದೇವೆ. ಹೆಚ್ಚುವರಿ ಕಾವೇರಿ ನೀರಿನ ಬಳಕೆಗಾಗಿ ಯೋಜನೆಯನ್ನು ಸಿದ್ಧಪಡಿಸಬೇಕಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ.

ಯಾವ ಪ್ರದೇಶಗಳಿಗೆ ಈ ಹೆಚ್ಚುವರಿ 6 ಟಿಎಂಸಿ ಅಡಿ ಕಾವೇರಿ ನೀರನ್ನು ಪೂರೈಸಬೇಕೆಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಇಂಜಿನಿಯರ್-ಇನ್-ಚೀಫ್ ಬಿ ಸುರೇಶ್ ಅವರು ಹೇಳಿದ್ದಾರೆ.

ಅನೇಕಲ್ ತಾಲೂಕು ಮತ್ತು ಪೆರಿಫೆರಲ್ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಆದರೆ, ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಾವು ಪ್ರಸ್ತುತ 19 ಟಿಎಂಸಿ ಅಡಿ ಕಾವೇರಿ ನೀರನ್ನು ಬಳಸುತ್ತಿದ್ದೇವೆಂದು ಹಿರಿಯ ಇಂಜಿನಿಯರ್ ಹೇಳಿದ್ದಾರೆ.

“ಕಾವೇರಿ ನೀರು ಸರಬರಾಜು ಯೋಜನೆ ಹಂತ 5 ರ ಅಡಿಯಲ್ಲಿ ಇನ್ನೂ 10 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ. ಈ ನೀರು 110 ಹಳ್ಳಿಗಳಿಗೆ ಹೋಗುತ್ತದೆ ಮತ್ತು ಒಂದು ಟಿಎಂಸಿ ಬಿಬಿಎಂಪಿ ವ್ಯಾಪ್ತಿಗೆ ಹರಿದು ಹೋಗುತ್ತದೆ ಎಂದು ತಿಳಿಸಿದ್ದಾರೆ.

ಮೇಕೆದಾಟು ಯೋಜನೆಯನ್ನು ಸಿಡಬ್ಲ್ಯುಎಂಎ ಮುಂದೆ ಮಂಡಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. “ನಮ್ಮ ಅಧಿಕಾರಿಗಳು ಪ್ರಾಧಿಕಾರದ 89 ನೇ ಸಭೆಯಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಚರ್ಚೆಗಳನ್ನು ಪ್ರಸ್ತಾಪಿಸಿದ್ದಾರೆ. ಮುಂದಿನ ಸಭೆಯಲ್ಲಿ ಯೋಜನೆ ಕುರಿತು ಚರ್ಚಿಸುವುದಾಗಿ ಪ್ರಾಧಿಕಾರ ಭರವಸೆ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗುವುದು ಎಂದು ಮತ್ತೊಬ್ಬ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com