ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ: ಎನ್‌ಜಿಟಿಗೆ ಬಿಡಿಎ ಮಾಹಿತಿ

ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬುಧವಾರ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಅಫಿಡವಿಟ್ ಸಲ್ಲಿಸಿದೆ.
ಬೆಳ್ಳಂದೂರು ಕೆರೆ
ಬೆಳ್ಳಂದೂರು ಕೆರೆ

ಬೆಂಗಳೂರು: ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬುಧವಾರ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಅಫಿಡವಿಟ್ ಸಲ್ಲಿಸಿದೆ.

ಪ್ರಾಧಿಕಾರವು ಕೆರೆಯ ಮೂಲಕ ರಸ್ತೆ ನಿರ್ಮಿಸುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಹರಿಕೃಷ್ಣ ಅವರು ನ್ಯಾಯಮಂಡಳಿಗೆ ಸಲ್ಲಿಸಿದ್ದ ದೂರಿಗೆ ಪ್ರತಿಯಾಗಿ ಬಿಡಿಎ ಅಫಿಡವಿಟ್ ಸಲ್ಲಿಸಿದೆ.

ಕೆರೆ ಬಳಿ ಬಿಡಿಎ ಎಂದಿಗೂ ರಸ್ತೆ ನಿರ್ಮಿಸಿಲ್ಲ. ಕೊಳಚೆ ನೀರು ಕೆರೆಗೆ ಸೇರದಂತೆ ಕೆಳಭಾಗಕ್ಕೆ ತಿರುಗಿಸುವ ಸಲುವಾಗಿ ಬಿಡಿಎ ಕೇವಲ ತಿರುವು ಕಾಲುವೆ ಹಾಗೂ ಕಾಲು ದಾರಿ ನಿರ್ಮಿಸಲಾಗಿತ್ತು. ಆದರೆ, ನಮ್ಮಿಂದ ರಸ್ತೆ ನಿರ್ಮಿಸಲಾಗಿದೆ ಎಂದು ತಪ್ಪಾಗಿ ವರದಿ ಮಾಡಲಾಗಿದೆ.

ಕೆರೆಯ ಹೂಳು ತೆಗೆಯಲು ಮತ್ತು ಹೂಳು ಸಾಗಿಸುವ ಟ್ರಕ್‌ಗಳ ಸಂಚಾರಕ್ಕೆ ಮಾರ್ಗದ ಅಗತ್ಯವಿದೆ. "ಇದು ನಮ್ಮ ಕಡೆಯಿಂದ ಆಗಿರುವ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹೂಳು ತೆಗೆಯುವಿಕೆಯನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಇದಕ್ಕಾಗಿ ಆರ್‌ಎಂಎನ್ ಇನ್‌ಫ್ರಾಸ್ಟ್ರಕ್ಚರ್ 100 ಕೋಟಿ ರೂಪಾಯಿ ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡಿದೆ ಎಂದು ನ್ಯಾಯಮಂಡಳಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೂಳು ತೆಗೆಯುವ ಕಾಮಗಾರಿಯನ್ನು ಪೂರ್ಣಗೊಳಿಸಲು ಬಿಡಿಎಗೆ ಕನಿಷ್ಠ ಒಂದು ವರ್ಷ ಸಮಯ ಬೇಕಾಗುತ್ತದೆ, ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕೊಳಚೆನೀರು ಸಂಸ್ಕರಣಾ ಘಟಕದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತದೆ. ಇದರಿಂದ ಕೆರೆಗೆ ಸೇರುವ ಮೊದಲು ನೀರನ್ನು ಸಂಸ್ಕರಿಸಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಬೆಳ್ಳಂದೂರು ಕೆರೆಯು 916 ಎಕರೆ 43 ಗುಂಟಾಗಳನ್ನು ಒಳಗೊಂಡಿರುವ ನಗರದ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಬಿಡಿಎ ಅಧಿಕಾರಿಗಳು ಒದಗಿಸಿದ ದತ್ತಾಂಶದ ಪ್ರಕಾರ, ಒಟ್ಟಾರೆ ಶೇ.57.7 ರಷ್ಟು ಹೂಳನ್ನು ಕೆರೆಯಿಂದ ಜಿಪಿಎಸ್ ಅಳವಡಿಸಿದ ಟಿಪ್ಪರ್‌ಗಳ ಮೂಲಕ ಸಾಗಿಸಲಾಗಿದೆ. ಕೆರೆಯಲ್ಲಿ ಈಗಾಗಲೇ ಒಟ್ಟು 16.88 ಲಕ್ಷ ಕ್ಯೂಬಿಕ್ ಮೀಟರ್ ಹೂಳು ತೆಗೆಯಲಾಗಿದೆ ಎಂದು ತಿಳಿಸಿದೆ.

"ಮಳೆಯಿಂದಾಗಿ ಜುಲೈ ತಿಂಗಳಿನಿಂದ ತಾತ್ಕಾಲಿಕವಾಗಿ ಕೆರೆಯಲ್ಲಿ ಹೂಳು ತೆಗೆಯುವ ಕೆಲಸವನ್ನು ನಿಲ್ಲಿಸಲಾಗಿದೆ. ವರ್ತೂರು ಕೆರೆಯಲ್ಲಿಯೂ ಬಿಡಿಎ ಹೂಳು ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಶೇ.96ರಷ್ಟು ಹೂಳು ತೆಗೆಯಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com