ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಬಳಿಯ ಢಾಬಾದಲ್ಲಿ ಫೋಟೋಶೂಟ್ ನಂತರ ಉಂಟಾದ ವಾಗ್ವಾದದಲ್ಲಿ ಗುಂಪೊಂದು 18 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಗ್ರಾಹಕರನ್ನು ಆಕರ್ಷಿಸಲು 'ಢಾಬಾ'ದ ಪ್ರವೇಶದ್ವಾರದ ಗೋಡೆಯಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ ಮತ್ತು ಫೋಟೋಶೂಟ್‌ಗಾಗಿ ಬಹಳಷ್ಟು ಜನರು ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಭಾನುವಾರ ಸಂಜೆ ಸೂರ್ಯ ಮತ್ತು ಆತನ ಮೂವರು ಸ್ನೇಹಿತರು ತಮ್ಮ ಫೋಟೋ ಕ್ಲಿಕ್ಕಿಸುತ್ತಿದ್ದಾಗ, 'ಢಾಬಾ'ದಲ್ಲಿ ಊಟ ಮಾಡಿದ ಮತ್ತೊಂದು ಗುಂಪು ಅಲ್ಲಿಗೆ ಆಗಮಿಸಿತು ಮತ್ತು ತಮ್ಮ ಫೋಟೊವನ್ನು ಸಹ ಕ್ಲಿಕ್ಕಿಸುವಂತೆ ಹೇಳಿತು. ಸೂರ್ಯ ಮತ್ತು ಆತನ ಸ್ನೇಹಿತರು ಆರಂಭದಲ್ಲಿ ನಿರಾಕರಿಸಿದರು. ಆದರೆ, ನಂತರ ಫೋಟೊ ಕ್ಲಿಕ್ಕಿಸಲು ಒಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಂಡದಲ್ಲಿದ್ದವರು ಸೂರ್ಯ ಮತ್ತು ಆತನ ಸ್ನೇಹಿತರನ್ನು ತಮ್ಮ ವಾಟ್ಸಾಪ್ ಸಂಖ್ಯೆಗಳಲ್ಲಿ ಒಂದಕ್ಕೆ ಕೂಡಲೇ ಫೋಟೊಗಳನ್ನು ಕಳಿಸುವಂತೆ ಕೇಳಿದ್ದಾರೆ. ಆದರೆ, ಅವುಗಳನ್ನು ಕ್ಯಾಮೆರಾ ಬಳಸಿ ತೆಗೆದಿರುವುದರಿಂದ ಅವುಗಳನ್ನು ಮೊದಲು ಡೌನ್‌ಲೋಡ್ ಮಾಡಿ ಸಿಸ್ಟಮ್‌ಗೆ ವರ್ಗಾಯಿಸಬೇಕಾಗಿರುವುದರಿಂದ ಅವುಗಳನ್ನು ನೇರವಾಗಿ ಮೊಬೈಲ್‌ಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಸೂರ್ಯ ಅವರಿಗೆ ಹೇಳಿದ್ದಾರೆ.
ಆದರೂ, ಗುಂಪು ಆ ಚಿತ್ರಗಳನ್ನು ತಕ್ಷಣವೇ ವರ್ಗಾಯಿಸುವಂತೆ ಒತ್ತಾಯಿಸುತ್ತಲೇ ಇತ್ತು. ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ದಿಲೀಪ್ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬಾತ ಹರಿತವಾದ ಆಯುಧ ತೆಗೆದುಕೊಂಡು ಸೂರ್ಯನ ಎದೆಗೆ ಇರಿದಿದ್ದಾನೆ ಎಂದು ಅವರು ಹೇಳಿದರು.
ಸ್ಥಳದಲ್ಲೇ ಕುಸಿದು ಬಿದ್ದ ಸೂರ್ಯ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ. ಆರೋಪಿಗಳ ಗುಂಪು ತಮ್ಮ ದ್ವಿಚಕ್ರವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದೆ ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತನ ಸ್ನೇಹಿತರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಐವರು ಆರೋಪಿಗಳಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು, ಉಳಿದವರನ್ನು ಗುರುತಿಸಿ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಮಲ್ಲಿಕಾರ್ಜುನ್ ಬಲ್ದಾನಿ ತಿಳಿಸಿದ್ದಾರೆ.
Advertisement