ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 11 ಭೂಮಾಪನ ಕಚೇರಿಗಳ ಮೇಲೆ ಸೋಮವಾರ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಅದೇಶದ ಮೇರೆಗೆ ಲೋಕಾಯುಕ್ತ ಸಂಸ್ಥೆಯ ನ್ಯಾಯಾಂಗ ಮತ್ತು ಪೊಲೀಸ್ ವಿಭಾಗಗಳ ಅಧಿಕಾರಿಗಳ ತಂಡ ಎರಡೂ ಜಿಲ್ಲೆಗಳ ವ್ಯಾಪ್ತಿಯ 11 ಭೂಮಾಪನ, ದುರಸ್ತಿ, ನಕ್ಷೆ ಸೇರಿದಂತೆ ಇತರೆ ಅರ್ಜಿಗಳ ವಿಲೇವಾರಿ, ಭ್ರಷ್ಟಾಚಾರ ಅಧಿಕಾರಿ ದುರುಪಯೋಗ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಶೋಧಿಸಿದೆ.
ಈ ನಡುವೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಸೋಮವಾರ ಸಂಜೆ ನಗರದ ಕೆಂಪೇಗೌಡ ರಸ್ತೆಯಲ್ಲಿ ಕಂದಾಯ ಭವನದಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಮ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ ಹಾಗೂ ಕೆ.ಆರ್.ಪುರ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ಲೋಕಾಯುಕ್ತ ಪ್ರಶ್ನೆಗೆ ಸಿಬ್ಬಂದಿ ಕಕ್ಕಾಬಿಕ್ಕಿ
ದಾಳಿ ವೇಳೆ ದಾಖಲೆಗಳ ಪರಿಶೀಲಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಸಿಬ್ಬಂದಿಗಳ ಬಳಿ ದಾಖಲೆಗಳನ್ನು ಕೇಳಿದಾಗ ಕಕ್ಕಾಬಿಕ್ಕಿಯಾಗಿದ್ದದ್ದು ಕಂಡು ಬಂದಿತು. ಕೆಜಿ ರಸ್ತೆಯ ಕಂದಾಯ ಭವನದಲ್ಲಿರುವ ಭೂಮಾಪನ ಕಚೇರಿಗೆ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಸಿಬ್ಬಂದಿಯೊಬ್ಬರ ಬಳಿ ರೂ.40 ಸಾವಿರ ನಗದು ಪತ್ತೆಯಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ ಮಕ್ಕಳ ಶಾಲಾ ಶುಲ್ಕ ಪಾವತಿಗೆ ಈ ಹಣ ಇರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಆಗ ಲೋಕಾಯುಕ್ತರು ಈ ಹಣದ ಬಗ್ಗೆ ಏಕೆ ಕಚೇರಿಯ ರಿಜಿಸ್ಟರ್ ನಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದಾಗ ನಿರುತ್ತರನಾಗಿದ್ದಾನೆ. ಬಳಿಕ ಅಧಿಕಾರಿಗಳಉ ಹಣವನ್ನು ಜಪ್ತಿ ಮಾಡಿದ್ದು, ಈ ಕುರಿತು ಲೋಕಾಯುಕ್ತ ಕಚೇರಿಗೆ ವಿವರ ಸಲ್ಲಿರುವಂತೆ ಅಧಿಕಾರಿಗಳಿಗೆ ಮೂರು ದಿನಗಳ ಗಡುವು ನೀಡಿದ್ದಾರೆಂದು ತಿಳಿದುಬಂದಿದೆ.
ಭೂಮಾಪನ ಇಲಾಖೆಯ ಕಚೇರಿಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದರಂತೆ 11 ತಂಡಗಳನ್ನು ರಚಿಸಿ, ಭೂ ದಾಖಲೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು ಎಂದು ವರದಿಗಳು ತಿಳಿಸಿವೆ.
Advertisement