ಸೈಬರ್ ವಂಚಕರ ಕಪಿಮುಷ್ಠಿಗೆ ಸಿಲುಕಿ ಸೌದಿಯಲ್ಲಿ ಜೈಲು ಸೇರಿದ್ದ ದಕ್ಷಿಣ ಕನ್ನಡದ ವ್ಯಕ್ತಿ ತವರಿಗೆ ವಾಪಸ್

ಸೈಬರ್ ವಂಚಕರ ಕಪಿಮುಷ್ಠಿಗೆ ಸಿಲುಕಿ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಾಗಿ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಕೊನೆಗೂ ತಾಯ್ನಾಡಿಗೆ ಬಂದು ತಲುಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಸೈಬರ್ ವಂಚಕರ ಕಪಿಮುಷ್ಠಿಗೆ ಸಿಲುಕಿ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಾಗಿ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಕೊನೆಗೂ ತಾಯ್ನಾಡಿಗೆ ಬಂದು ತಲುಪಿದ್ದಾರೆ.

ಸೈಬರ್ ವಂಚಕರಿಂದಾಗಿ ದಕ್ಷಿಣ ಕನ್ನಡದ ಕಡಬ ತಾಲೂಕಿನ ಮುಜೂರು ಗ್ರಾಮದ ಚಂದ್ರಶೇಖರ ಎಂಕೆ (33) ಎಂಬುವರು ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ.

ರಿಯಾದ್‌ನಲ್ಲಿ ಅಲ್ ಫನಾರ್ ಕೋನಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು. 2 ವರ್ಷದ ಹಿಂದೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಲು ಅಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದು, ಖರೀದಿ ವೇಳೆ ಅಂಗಡಿಯವನು ಎರಡು ಬಾರಿ ಹೆಬ್ಬೆರಳಿನ ಗುರುತನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಚಂದ್ರಶೇಖರ್ ಅವರ ಮೊಬೈಲ್‌ ಫೋನ್'ಗೆ ಅರೇಬಿಕ್ ಭಾಷೆಯಲ್ಲಿ ಸಂದೇಶ ಬಂದಿದೆ. ಇದೇ ವೇಳೆ ವ್ಯಕ್ತಿ ಚಂದ್ರಶೇಖರ್ ಅವರಿಂದ ಒಟಿಪಿ ಕೇಳಿದ್ದಾನೆ. ಹಿಂದೂ ಮುಂದು ಆಲೋಚನೆ ಮಾಡದೆ ಚಂದ್ರಶೇಖರ್ ಅವರು ಒಟಿಪಿ ಹಂಚಿಕೊಂಡಿದ್ದೇ, ಸೆರೆವಾಸಕ್ಕೆ ಕಾರಣವಾಗಿತ್ತು.

ವಂಚಕರು ಚಂದ್ರಶೇಖರ್ ಅವರ ದಾಖಲೆಗಳನ್ನು ಬಳಸಿಕೊಂಡು, ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ, ಬಳಿಕ ರಿಯಾದ್‌ನಲ್ಲಿರುವ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ SR 22,000 ಅನ್ನು ಚಂದ್ರಶೇಖರ್ (ವಂಚನೆಯಿಂದ ತೆರೆಯಲಾದ ಖಾತೆ) ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಆ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಲಾಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಚಂದ್ರಶೇಖರ್ ಅವರನ್ನು ಸೌದಿ ಪೊಲೀಸರು ಬಂಧನಕ್ಕೊಳಪಡಿಸಿದ್ದರು.

ನನ್ನ ಮೊಬೈಲ್'ಗೆ ಅರೇಬಿಕ್ ಭಾಷೆಯಲ್ಲಿ ಸಂದೇಶವನ್ನು ಕಳುಹಿಸಲಾಗಿತ್ತು. ಲಿಂಕ್ ಕೂಡ ಅದರಲ್ಲಿತ್ತು. ಲಿಂಕ್ ಒತ್ತಿದ್ದೆ. ವಂಚಕರು ಕಳುಹಿಸಿದ ಸಂದೇಶವೆಂಬುದು ನನಗೆ ತಿಳಿದಿರಲಿಲ್ಲ. ಇದಾದ ಕೆಲವು ತಿಂಗಳ ಬಳಿಕ ಪೊಲೀಸರಿಂದ ದೂರವಾಣಿ ಕರೆ ಬಂದಿತ್ತು. ಮಹಿಳೆಯೊಬ್ಬರು ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಲಿಂಕ್ ಕ್ಲಿಕ್ ಮಾಡಿದ ಹಿನ್ನೆಲೆಯಲ್ಲಿ ವಂಚಕರಿಗೆ ನನ್ನ ಐಡಿ, ಬ್ಯಾಂಕ್ ವಿವರಗಳು ಸಿಕ್ಕಿದೆ ಎಂಬುದು ನಂತರವೇ ತಿಳಿದುಬಂದಿತ್ತು. ವಂಚಕರು ನಕಲಿ ಖಾತೆ ಸೃಷ್ಟಿಸಿ ರೂ.4.9 ಲಕ್ಷ ಕಸಿದಿದ್ದಾರೆ. ಡಿಸೆಂಬರ್ 20, 2022ರಂದು ನನ್ನನ್ನು ಸೌದ ಪೊಲೀಸರು ಬಂಧಕ್ಕೊಳಪಡಿಸಿದ್ದರು. ಬಳಿಕ ನಾನು ಕೆಲಸ ಮಾಡಿದ ಸಂಸ್ಥೆ, ಶ್ರೀಧರಗೌಡ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ಸ್ನೇಹಿತರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ದುರದೃಷ್ಟವಶಾತ್ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಂದ ನನಗೆ ಯಾವುದೇ ಬೆಂಬಲ ಸಿಗಲಿಲ್ಲ. ದೂರುದಾರರಿಗೆ ಹಣ ನೀಡಿ, ಪೊಲೀಸರಿಗೆ ದಂಡ ಪಾವತಿಸಿದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ. ಸೋಮವಾರ ರಾತ್ರಿ ಚಂದ್ರಶೇಖರ್ ಅವರು ಮಂಗಳೂರಿಗೆ ವಾಪಸ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com