ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್: ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ, ಹೆಮ್ಮೆಯ ಕನ್ನಡಿಗನಿಗೆ ತ್ರಿವರ್ಣ ಧ್ವಜ ಹಿಡಿದು ಸೆಲ್ಯೂಟ್!
ಬೆಂಗಳೂರು: ಜಮ್ಮುವಿನ ರಜೌರಿಯಲ್ಲಿ ಭಯೋತ್ಪಾದಕರ ಗುಂಪನ್ನು ಸದೆಬಡಿಯುವಾಗ ಹುತಾತ್ಮನಾದ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ವೀರ ಮರಣವನ್ನಪ್ಪಿದ ಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಅಂತಿಮ ದರ್ಶನಕ್ಕೂ ಮುನ್ನ ಪ್ರಾಂಜಲ್ ಅವರಿಗೆ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಭಾರತೀಯ ಸೇನೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಲಾಯಿತು.
ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಪೊಲೀಸ್ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿತ್ತು. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿತ್ತು.ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನರು, ಗಣ್ಯರು, ಬಂಧು-ಬಾಂಧವರು ಆಗಮಿಸಿ ವೀರಯೋಧನ ಅಂತಿಮ ದರ್ಶನ ಪಡೆದಿದರು.
ಇದೀಗ ಪ್ರಾಂಜಲ್ ಅಂತಿಮ ಯಾತ್ರೆ ನಡೆಯುತ್ತಿದೆ. ಪ್ರಾಂಜಲ್ ಅವರ ನಿವಾಸದಿಂದ ಕೂಡ್ಲು ಗೇಟ್ ವರೆಗೆ ಮೆರವಣಿಗೆಯಲ್ಲಿ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು.
ಜಿಗಣಿ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್ ರೋಡ್, ಕೋನಪ್ಪನ ಅಗ್ರಹಾರ ಸರ್ಕಲ್, ಕೂಡ್ಲುಗೇಟ್ ಮೂಲಕ ಹುತಾತ್ಮ ಯೋಧನ ಅಂತಿಮ ಯಾತ್ರೆ ಸಾಗಿತು. ಈ ವೇಳೆ ಮಾರ್ಗದುದ್ದಕ್ಕೂ ನಿಂತಿದ್ದ ಜನರು ತ್ರಿವರ್ಣ ಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಿದರು. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್ ಎಂದು ಘೋಷಣೆಗಳನ್ನು ಕೂಗಿದರು. ಈ ದೃಶ್ಯವು ನೋಡುಗರ ಮನಕಲಕುವಂತಿತ್ತು.
ಸೋಮಸುಂದರ ಪಾಳ್ಯ ಚಿತಾಗಾರದಲ್ಲಿ ಪ್ರಾಂಜಲ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ.
ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್: ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ತ್, ಪ್ಯಾರಾಟ್ರೂಪರ್ ಸಚಿನ್ ಲಾರ್ ಮೊನ್ನೆ ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಹುತಾತ್ಮರಾದ ವೀರ ಯೋಧರಾಗಿದ್ದು, ಅವರಲ್ಲಿ ಕ್ಯಾಪ್ಟನ್ ಪ್ರಾಂಜಲ್ ಕರ್ನಾಟಕದವರು.
ಮಂಗಳೂರಿನಲ್ಲಿ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ ಪ್ರಾಂಜಲ್ ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪಡೆದು, ನೇರವಾಗಿ ಭಾರತೀಯ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್ ಅವರ ವಿವಾಹ ನೆರವೇರಿದ್ದು, ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್ ಮಾಡುತ್ತಿದ್ದಾರೆ.
ಈ ನಡುವೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಕೂಡ ಹುತಾತ್ಮ ವೀರ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿೃ, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಳೆದ ರಾತ್ರಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣಕ್ಕೆ ಹುತಾತ್ಮ ವೀರ ಯೋಧನ ಪಾರ್ಥೀವ ಶರೀರವನ್ನು ಕರೆತರಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಮತ್ತು ಇತರ ರಾಜಕಾರಣಿಗಳು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಧನ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಅಲ್ಲದೆ, ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವು ನೀಡುವುದಾಗಿ ತಿಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ