ಕಳೆದ 8 ವರ್ಷಗಳಿಂದ ಧೂಳು ತಿನ್ನುತ್ತಿರುವ ಕರ್ನಾಟಕದ ಜಾತಿ ಗಣತಿ ಬಿಡುಗಡೆ ಯಾವಾಗ: ಮುಖ್ಯಮಂತ್ರಿ ಚಂದ್ರು ಪ್ರಶ್ನೆ

ಬಿಹಾರದಲ್ಲಿ ಜಾತಿ ಗಣತಿ ಮಾಡಿ, ವರದಿಯನ್ನು ಬಿಡುಗಡೆ ಮಾಡಿರುವ ಸಿಎಂ ನಿತೀಶ್ ಕುಮಾರ್ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ರಾಜ್ಯದಲ್ಲಿ ಜಾತಿ ಗಣತಿ ವರದಿಯ ಅನುಷ್ಠಾನ ಯಾವಾಗ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಬಿಹಾರದಲ್ಲಿ ಜಾತಿ ಗಣತಿ ಮಾಡುವ ಮೂಲಕ ಹಿಂದುಳಿದ ವರ್ಗದವರಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲು ಮುಂದಾಗಿರುವ ಸಿಎಂ ನಿತೀಶ್ ಕುಮಾರ್ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ರಾಜ್ಯದಲ್ಲಿ ಜಾತಿ ಗಣತಿ ವರದಿಯ ಅನುಷ್ಠಾನ ಯಾವಾಗ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1931ರಲ್ಲಿ ಜಾತಿ ಗಣತಿ ಆಗಿರುವುದು ಬಿಟ್ಟರೆ ಇದುವರೆಗೂ ಜಾತಿಗಣತಿ ಮಾಡಿಲ್ಲ. ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ಮಾಡಿಕೊಂಡು ಬಂದಿದ್ದಾರೆ. ಮೀಸಲಾತಿ ಇದೆ. ಆದರೆ, ಜಾತಿ ಗಣತಿಯೇ ಇಲ್ಲ. ಅಂದಾಜಿನ ಮೇಲೆ ಮೀಸಲಾತಿ ಕೊಡುತ್ತಾ ಬಂದಿದ್ದು, ಹಲವು ಸಮುದಾಯಗಳಿಗೆ ಅನ್ಯಾಯ ಆಗಿದೆ ಎಂದರು. 

ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 2015ರಲ್ಲಿ 180 ಕೋಟಿ ರೂ. ಖರ್ಚು ಮಾಡಿ ಜಾತಿ ಗಣತಿ ನಡೆಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗ ರಾಜ್ಯದಾದ್ಯಂತ ಮನೆ ಮನೆಗೆ ತೆರಳಿ ಗಣತಿ ನಡೆಸಿತ್ತು. ದುರಂತ ಎಂದರೆ, ಆ ವರದಿಯನ್ನು ಆಯೋಗ ಇನ್ನೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಆ ವರದಿಯನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು. 

ಜಾತಿ ಗಣತಿ ಆಚೆ ಬಂದರೆ ರಾಜಕೀಯದಲ್ಲಿ ಏರು ಪೇರು ಉಂಟಾಗಲಿದೆ ಎನ್ನುವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಯದರ್ಶಿಗಳು ವರದಿ ಸಿದ್ದವಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದರೂ, ವರದಿಯನ್ನು ತೆಗೆದುಕೊಂಡಿಲ್ಲ. 7 ಸದಸ್ಯರಲ್ಲಿ ಇಬ್ಬರು ಸಹಿ ಹಾಕಿಲ್ಲ. ಆಯೋಗದ ಅಧ್ಯಕ್ಷ ಕಾಂತರಾಜು ಅವರೇ ಸಹಿ ಹಾಕಿಲ್ಲ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಬಳಿಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ವರದಿ ನೀಡಲು ಹೋದಾಗ ಕೂಡ ತೆಗೆದುಕೊಂಡಿಲ್ಲ ಎಂದು ಶಾಶ್ವತ ಆಯೋಗ ಹೇಳಿದೆ. ನಂತರ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕೂಡ ಈ ವರದಿಯನ್ನು ತೆಗೆದುಕೊಳ್ಳದೆ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು. 

ಈಗಲಾದರೂ ಜಾತಿ ಗಣತಿ ವರದಿ ಬಹಿರಂಗಪಡಿಸಲಿ

ಈಗ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಿದ್ದಾರೆ. ಎಸ್‌ಟಿ ವರ್ಗಕ್ಕೇ ಸೇರಬೇಕೆನ್ನುವ ಒತ್ತಾಯವನ್ನು ಕುರುಬ ಸಮಾಜವೇ ಮಾಡಿದೆ. ಅದಕ್ಕಾಗಿ ಸುಮ್ಮನಾಗಿದ್ದಾರೆ ಎನಿಸುತ್ತದೆ. ಶಾಶ್ವತ ಸಮಿತಿ ಅಧ್ಯಕ್ಷ ಕಾಂತರಾಜು ಸ್ಥಾನಕ್ಕೆ ಈಗ ಜಯಪ್ರಕಾಶ್ ಹೆಗಡೆ ಬಂದಿದ್ದು, ನಾವು ಅವರನ್ನು ಭೇಟಿ ಮಾಡಿದಾಗ, ವರದಿ ಸಂಪೂರ್ಣವಾಗಿ ಸಿದ್ಧವಾಗಿದೆ. ನಾನು ಕೊಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು. 

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಮೂರು ಬಾರಿ ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ನವೆಂಬರ್ ಒಳಗಡೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜಯಪ್ರಕಾಶ್ ಹೆಗಡೆ ನವೆಂಬರ್ ತಿಂಗಳಿನಲ್ಲಿ ನಿವೃತ್ತರಾಗುತ್ತಿದ್ದಾರೆ . ಅದಕ್ಕೇ ಈ ರೀತಿ ಹೇಳಿಕೆ ನೀಡುತ್ತಿರಬೇಕು ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. 

ನವೆಂಬರ್ ಒಳಗಡೆ ಒಳಗೆ ಸಿದ್ದರಾಮಯ್ಯ ವರದಿ ತೆಗೆದುಕೊಳ್ಳದಿದ್ದರೆ ಸರ್ಕಾರದ ಕಾರ್ಯದರ್ಶಿಗೆ ವರದಿಯನ್ನು ಕೊಡಿ ಎಂದು ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಅವರನ್ನು ಒತ್ತಾಯಿಸಿದ ಅವರು, ತುರ್ತಾಗಿ ಸಿಎಂ ಸಿದ್ದರಾಮಯ್ಯ ಅವರು ವರದಿಯನ್ನು ತೆಗೆದುಕೊಂಡು ವಿಧಾನಸಭೆಯಲ್ಲಿ ಮಂಡಿಸಲಿ, ನಂತರ ಜನ ಅದನ್ನು ತೀರ್ಮಾನ ಮಾಡುತ್ತಾರೆ. ಹಣ ಖರ್ಚು ಮಾಡಿ ಸಮೀಕ್ಷೆ ಮಾಡಿದ್ದಾರೆ. ಆದರೆ, ಅದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿಕೆ ನೀಡಲಿ ಎಂದರು.

ಒಂದು ವೇಳೆ ನವೆಂಬರ್ ಒಳಗೆ ಅವರು ಜಾತಿಗಣತಿ ವರದಿ ತೆಗೆದುಕೊಳ್ಳದಿದ್ದರೆ ಜನಾಂದೋಲನ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆಯುತ್ತೇನೆ. ಅದಕ್ಕೆ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮತಬ್ಯಾಂಕಿಗೆ ತೊಂದರೆಯಾಗುವ ಕಾರಣಕ್ಕೆ ಅವರು ಜಾತಿ ಗಣತಿ ವರದಿ ತೆಗೆದುಕೊಂಡಿಲ್ಲ ಎನ್ನುವ ಅನುಮಾನ ಇದೆ. ಎರಡು ಪ್ರಬಲ ಸಮುದಾಯಗಳು ಇದಕ್ಕೆ ವಿರೋಧಿಸುವ ಭಯದಿಂದ ಸಿದ್ದರಾಮಯ್ಯ ಸುಮ್ಮನಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com