ಬೆಂಗಳೂರು: ಸ್ಕ್ರ್ಯಾಪ್ ಡೀಲರ್ ಮನೆಯಿಂದ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದವನ ಬಂಧನ

ತಿಲಕನಗರದಲ್ಲಿರುವ ಸ್ಕ್ರ್ಯಾಪ್ ಡೀಲರ್‌ನ ಮನೆಯಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಪ್ರಕರಣ ಬೇಧಿಸಲು ಆತನ ಸಂಬಂಧಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಿಲಕನಗರದಲ್ಲಿರುವ ಸ್ಕ್ರ್ಯಾಪ್ ಡೀಲರ್‌ನ ಮನೆಯಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಪ್ರಕರಣ ಬೇಧಿಸಲು  ಚಿನ್ನಾಭರಣ ಕಳೆದುಕೊಂಡಿದ್ದಾತನ ಸಂಬಂಧಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು ಬೈರಸಂದ್ರ ನಿವಾಸಿ ರಫೀಕ್ (35) ಎಂದು ಗುರುತಿಸಲಾಗಿದೆ. ಆತ ಅಲ್ಲಿ ಕಾಂಡಿಮೆಂಟ್ಸ್ ಅಂಗಡಿಯನ್ನು ಹೊಂದಿದ್ದಾರೆ. ಎಸ್ ಆರ್ ಕೆ ಗಾರ್ಡನ್ 2ನೇ ಮುಖ್ಯರಸ್ತೆ 2ನೇ ಕ್ರಾಸ್ ನಲ್ಲಿರುವ ತನ್ನ ಸಂಬಂಧಿ ಹಾಗೂ ಸ್ಕ್ರ್ಯಾಪ್ ಡೀಲರ್ ಶಾನವಾಜ್ ಎಂಬುವರ ಮನೆಯಲ್ಲಿ ಸುಮಾರು 2.5 ಕೆಜಿ ಚಿನ್ನಾಭರಣ ಹಾಗೂ 10 ಲಕ್ಷ ರೂ.ನಗದು ಕಳವು ಮಾಡಿದ್ದರು. 1.5 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಾನವಾಜ್ ತನ್ನ ಕುಟುಂಬ ಸದಸ್ಯರೊಂದಿಗೆ ಸೆಪ್ಟೆಂಬರ್ 23 ರಂದು ಮಂಡ್ಯದಲ್ಲಿ ತಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಕಳ್ಳತನ ನಡೆದಿತ್ತು. ಕುಟುಂಬವು ಸೆಪ್ಟೆಂಬರ್ 25 ರಂದು ಮನೆಗೆ ಹಿಂದಿರುಗಿದಾಗ ನಗದು ಮತ್ತು ಆಭರಣಗಳು ಕಾಣೆಯಾಗಿತ್ತು. ಮಗಳ ಮದುವೆಗೆಂದು ಶಾನವಾಜ್ ಚಿನ್ನಾಭರಣ ಖರೀದಿಸಿ ಮನೆಯಲ್ಲಿಟ್ಟಿದ್ದರು.

ಅವುಗಳನ್ನು ಕದಿಯಲು ರಫೀಕ್ ಕಳೆದ ಮೂರು ತಿಂಗಳಿನಿಂದ ಯೋಜನೆ ರೂಪಿಸುತ್ತಿದ್ದ ಎನ್ನಲಾಗಿದೆ. ಶಾನವಾಜ್ ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಯದಂತೆ ನಕಲಿ ಡೋರ್ ಕೀಗಳನ್ನು ಮಾಡಿಸಿಕೊಂಡಿದ್ದ. ಶಾನವಾಜ್ ಮತ್ತು ಅವರ ಕುಟುಂಬ ಸದಸ್ಯರು ಮಂಡ್ಯಕ್ಕೆ ಮದುವೆಗೆಂದು ಹೋದಾಗ, ರಫೀಕ್ ನಕಲು ಕೀಗಳನ್ನು ಬಳಸಿ ಬೆಲೆಬಾಳುವ ವಸ್ತುಗಳು ಮತ್ತು ನಗದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆ್ಯಪ್‌ಗಳ ಮೂಲಕ ಸಾಲ ಪಡೆದಿದ್ದು, ಸಾಲ ತೀರಿಸಲು ಬಯಸಿದ್ದ ಎನ್ನಲಾಗಿದೆ. ಹೀಗಾಗಿ ಕಳ್ಳತನ ಮಾಡಿದ್ದಾನೆ.

ಕಳ್ಳತನದ ನಂತರ ರಫೀಕ್ ಯಾವುದೇ ಆತಂಕ ತೋರಿಸಲಿಲ್ಲ ಎಂದು ಶಾನವಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಅಂದು ಬೆಳಿಗ್ಗೆ ಬೇಗನೆ ಮನೆಗೆ ಬಂದು ಎರಡು ದಿನಗಳ ಕಾಲ ನಮ್ಮೊಂದಿಗೆ ಇದ್ದ. ಪೊಲೀಸರು ನಮ್ಮ ಮನೆಗೆ ಭೇಟಿ ನೀಡಿದಾಗಲೂ ಆತ ಅಲ್ಲಿಯೇ ಇದ್ದ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಫೀಕ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುವ ಬಗ್ಗೆ ತಿಳಿದುಕೊಳ್ಳಲು ರಫೀಕ್ ನೆಟ್ ಸರ್ಫ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com