ಮಂಗಳೂರು: ಹಮಾಸ್ ಉಗ್ರರ ದಾಳಿಯಿಂದ ಇಸ್ರೇಲ್ ಮತ್ತು ಪ್ಯಾಲಿಸ್ಟೀನ್ ನಡುವೆ ಭೀಕರ ಯುದ್ಧವೇ ಶುರುವಾಗಿದೆ. ಪರಿಣಾಮ ಇಸ್ರೇಲ್‌ನಲ್ಲಿರುವ ಭಾರತೀಯರು ಮತ್ತು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಇಸ್ರೇಲ್‌ನಲ್ಲಿರುವ ಕನ್ನಡಿಗ ಲೆನಾರ್ಡ್ ಫೆರ್ನಾಂಡೀಸ್ ಎಂಬುವವರು ಇಸ್ರೇಲ್‌ನ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಕಳೆದ 14 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ನಾಗರಿಕರನ್ನು ನಿರ್ದಯವಾಗಿ ಕೊಲ್ಲುವ ಮತ್ತು ಅಪಹರಣ ಮಾಡುವಂತಹ ಇಂತಹ ಕ್ರೂರ ಪರಿಸ್ಥಿತಿಯನ್ನು ಎಂದಿಗೂ ನೋಡಿರಲಿಲ್ಲ, ಪ್ರಸ್ತುತ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ವಿಭಿನ್ನ ಮತ್ತು ಚಿಂತಾಜನಕವಾಗಿದೆ. ಆದರೆ ಇಸ್ರೇಲ್ ಪಡೆಯ ಮೇಲೆ ಸಂಪೂರ್ಣ ಭರವಸೆ ಇದೆ. ದೇಶವನ್ನು ರಕ್ಷಣೆ ಮಾಡಲಿದ್ದಾರೆಂಬ ನಂಬಿಕೆಯಿದೆ ಎಂದು ಇಸ್ರೇಲ್‌ನ ಹೆರ್ಜ್ಲಿಯಾದಲ್ಲಿ ವಾಸವಿರುವ ಮಂಗಳೂರಿನ ಸಮೀಪದ ವಾಮಂಜೂರಿನ ಲೆನಾರ್ಡ್ ಫೆರ್ನಾಂಡೀಸ್ ಎಂಬುವವರು ಹೇಳಿದ್ದಾರೆ.
ಟೆಲ್ ಅವಿವ್, ಜೆರುಸಲೆಮ್, ರಮತ್ ಹಶರೋನ್, ಗಾಶ್ ಕಿಬ್ಬುಟ್ಜ್ ಮತ್ತು ಇಸ್ರೇಲ್‌ನ ಇತರ ಭಾಗಗಳಲ್ಲಿ ಮಂಗಳೂರಿನ ಹಲವರು ವಾಸವಿದ್ದು, ಎಲ್ಲರೂ ತಾವು ಎದುರಿಸುತ್ತಿರುವ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದು, ತಾವಿರುವ ಸ್ಥಳದಿಂದ ಹೊರಗೆ ಬಾರದಂತೆ, ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಾವಿಸುವ ಪ್ರದೇಶ ಸುರಕ್ಷಿತವಾಗಿದೆ. ಆದರೂ ಗಾಜಾದಿಂದ ಕ್ಷಿಪಣಿಗಳು ಹಾರುತ್ತಿರುವುದನ್ನು ನೋಡುತ್ತಿದ್ದೇವೆ. ನಾವಿರುವ ಸ್ಥಳದಲ್ಲಿಯೂ ಕೆಲ ಕ್ಷಿಪಣಿಗಳು ಇಳಿದಿದ್ದವು. ಆದರೆ, ಅವುಗಳಲ್ಲಿ 15 ಕ್ಷಿಪಣಿಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು ಐರನ್ ಡೋಮ್‌ಗಳ ಸಹಾಯದಿಂದ ನಿಷ್ಕ್ರಿಯಗೊಳಿಸಿವೆ.
ಇಸ್ರೇಲ್ ಮೇಲೆ ಇಂತಹ ದಾಳಿಯನ್ನು ಎಂದಿಗೂ ನೋಡಿರಲಿಲ್ಲ, ಕೇಳಿರಲಿಲ್ಲ. ನಾಗರೀಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವುದು, ಅಪಹರಣ ಮಾಡುತ್ತಿರುವುದನ್ನು ನೋಡಿರಲಿಲ್ಲ. ಮನೆಗಳು ಮತ್ತು ಬೀದಿಗಳಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾರೆ. ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತಿದ್ದಾರೆ. ಇದರ ದೃಶ್ಯಾವಳಿಗಳು ಭಯಾನಕವಾಗಿವೆ ಎಂದು ಲೆನಾರ್ಡ್ ಅವರು ಹೇಳಿದ್ದಾರೆ.
ಜೆರುಸಲೆಮ್‌ನಲ್ಲಿ ವಾಸವಿರುವ ಫಾದರ್ ಸಂತೋಷ್ ಎಂಬುವವರು ಮಾತನಾಡಿ, ಇಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ ಆದರೆ, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ನಾವು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆಯ ಅವರ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಹೆಚ್ಚಿನ ಸ್ಫೋಟಗಳು ಇಸ್ರೇಲ್‌ನ ದಕ್ಷಿಣ ನಗರಗಳಲ್ಲಿ ಸಂಭವಿಸಿವೆ. ಪ್ರಸ್ತುತ ನಮ್ಮನ್ನು ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ಮೂಲದ ಪ್ರವೀಣ್ ಪಿಂಟೋ ಅವರು ಕಳೆದ 16 ವರ್ಷಗಳಿಂದ ಟೆಲ್ ಅವೀವ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ.
ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಅವರ ಮನೆಯಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಕಟ್ಟಡಕ್ಕೆ ಕ್ಷಿಪಣಿ ಅಪ್ಪಳಿಸಿ ಇಬ್ಬರು ಇಸ್ರೇಲ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಪ್ರವೀಣ್ ಅವರ ಪತ್ನಿ ನೀತಾ ಅವರು ಪತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪತಿ ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ, ಇಸ್ರೇಲ್ ಸರ್ಕಾರವು ರೆಡ್ ಅಲರ್ಟ್ ಘೋಷಿಸಿತ್ತು, ಇಸ್ರೇಲ್ ನಲ್ಲಿ ಮಂಗಳೂರು, ಉಡುಪಿ ಮತ್ತು ಕುಂದಾಪುರದ ಸುಮಾರು 500 ಕ್ಕೂ ಹೆಚ್ಚು ಜನರು ಇದ್ದಾರೆಂದು ಪತಿ ಮಾಹಿತಿ ನೀಡಿದ್ದಾರೆಂತು ನೀತಾ ಅವರು ಹೇಳಿದ್ದಾರೆ.
ಟೆಲ್ ಅವಿವ್‌ನಲ್ಲಿ ನೆಲೆಸಿರುವ ಮತ್ತೊಬ್ಬ ಮಂಗಳೂರಿಗ ಪ್ರಕಾಶ್ ಎಂಬುವವರು ಮಾತನಾಡಿ, ಕ್ಷಿಪಣಿ ದಾಳಿಯಿಂದಾಗಿ ಶನಿವಾರದಿಂದ ಬಂಕರ್‌ನೊಳಗೇ ಇದ್ದೇವೆ. ನನ್ನ ಸುರಕ್ಷತೆ ಬಗ್ಗೆ ಕುಟುಂಬ ಚಿಂತಿತವಾಗಿದೆ ಎಂದು ಹೇಳಿದ್ದಾರೆ.
ಹಮಾಸ್ ಉಗ್ರಗಾಮಿಗಳು ನಾವಿರುವ ಬಂಕರ್'ಗೆ ಬಹಳ ಹತ್ತಿರದಲ್ಲಿದ್ದರು.. ಬಳಿಕ ಇಸ್ರೇಲ್ ಪಡೆಗಳು ಅವರನ್ನು ವಶಪಡಿಸಿಕೊಂಡರು. ಕ್ಷಣಮಾತ್ರದಲ್ಲಿ ನಾವು ಬಚಾವ್ ಆದೆವು ಎಂದು ಟಾಕೋಡ್ ನಿವಾಸಿ ಗಾಡ್ವಿನ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್) ಹತ್ತಿರ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಇಸ್ರೇಲ್ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರುವಂತೆ, ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಾ, ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್) ಹತ್ತಿರ ಇರಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ, ಇಸ್ರೇಲ್ ಹೋಮ್ ಫ್ರಂಟ್ ಕಮಾಂಡ್ ವೆಬ್ಸೈಟ್ ಅಥವಾ ಕರಪತ್ರವನ್ನು ವೀಕ್ಷಿಸಿ ಎಂದು ತಿಳಿಸಿದ್ದಾರೆ. ಜೊತೆಗೆ https://www.indembassyisrael.gov.in ಸಂಪರ್ಕಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.
ಇಸ್ರೇಲ್‌ನಲ್ಲಿರುವ ಭಾರತದ ನಾಗರಿಕರಿಗೆ ಮತ್ತು ಕನ್ನಡಿಗರಿಗೆ ತುರ್ತು ಸಹಾಯದ ಅಗತ್ಯವಿರುವ ಸಂದರ್ಭಗಳಲ್ಲಿ, ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು (080222340676, 08022253707) ಹಾಗೂ ಕೇಂದ್ರ ಸಹಾಯವಾಣಿ ಸಂಖ್ಯೆ (+97235226748) ಸಂಪರ್ಕಿಸುವಂತೆಯೂ ಸಿಎಂ ಕೋರಿದ್ದಾರೆ.
Advertisement