ತೆರಿಗೆ ವಂಚನೆ: ಹೊಸಕೋಟೆ ಬಿರಿಯಾನಿ ಹೋಟೆಲ್ ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರೂ ತೆರಿಗೆ ಪಾವತಿಸದೆ ವಂಚಿಸುತ್ತಿದ್ದ ನಗರದ ಬಿರಿಯಾನಿ ಹೋಟೆಲ್‌ಗಳ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ದಳ ಸೋಮವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರೂ ತೆರಿಗೆ ಪಾವತಿಸದೆ ವಂಚಿಸುತ್ತಿದ್ದ ನಗರದ ಬಿರಿಯಾನಿ ಹೋಟೆಲ್‌ಗಳ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ದಳ ಸೋಮವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತ ಬಿರಿಯಾನಿ ಮತ್ತು ಮಾಂಸಾಹಾರಿ ಹೋಟೆಲ್‌ಗಳು ಇತ್ತೀಚೆಗೆ ಸಾಕಷ್ಟು ಖ್ಯಾತಿ ಗಳಿಸಿವೆ. ನಗರದ ಜನರು ಬೆಳ್ಳಂಬೆಳಗ್ಗೆಯೇ ಹೋಗಿ ಬಿರಿಯಾನಿ ಸವಿಯುವುದು ಟ್ರೆಂಡ್ ಆಗಿದೆ. ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದರೂ ಜಿಎಸ್‌ಟಿ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು.

ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ವಿಭಾಗದ ತಂಡ ವ್ಯಾಪಾರ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿತು. ಪರಿಶೀಲನೆ ವೇಳೆ ಬಹುತೇಕ ಹೋಟೆಲ್ ಮಾಲೀಕರು ತಮ್ಮ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ತೆರಿಗೆ ಬಿಲ್ಲು, ಪೂರೈಕೆ ಬಿಲ್ಲನ್ನು ನೀಡದೆ ಇರುವುದು, ಲೆಕ್ಕ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಕಂಡುಬಂದಿದೆ.

ಪರಿಶೀಲನೆ ವೇಳೆ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬನ ಮನೆಯಲ್ಲಿ ಬರೋಬ್ಬರಿ 1.47 ಕೋಟಿ ರೂ. ನಗದು ಪತ್ತೆಯಾಗಿದೆ. ಮತ್ತೊಂದು ಬಿರಿಯಾನಿ ಮಾಲೀಕರನ ಮನೆಯಲ್ಲಿಯೂ ನಗದು ಪತ್ತೆ ಆಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬಳಿಕ ಹಣವನ್ನು ಜಪ್ತಿ ಮಾಡಲಾಗಿದೆ.

ತೆರಿಗೆ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆರಿಗೆ ವಂಚನೆಯ ವಿಧಿವಿಧಾನಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತನಿಖೆ ಮುಂದುವರಿದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಅವರು ತಿಳಿಸಿದ್ದಾರೆ.

ಗ್ರಾಹಕರಿಂದ ನಗದು ಮತ್ತು ಯುಪಿಎ ಪಾವತಿ ಮೂಲಕ ವರ್ತುಕರು ಹಣ ಪಡೆಯುತ್ತಿದ್ದರು. ತೆರಿಗೆ ವಂಚನೆ ಮಾಡುವ ಉದ್ದೇಶಕ್ಕೆ ಯುಪಿಎ ಪಾವತಿ ಖಾತೆಗಳನ್ನೇ ಬದಲಾಯಿಸುವ ಮುಖಾಂತರ ನೈಜ ವಹಿವಾಟನ್ನು ಮುಚ್ಚಿಟ್ಟು ತೆರಿಗೆ ವಂಚಿಸುತ್ತಿದ್ದರು. ಓರ್ವ ಮಾಲೀಕನ ಬಳಿ 30 ಕ್ಯೂಆರ್ ಕೋಡ್ ಖಾತೆಗಳು ಇರುವುದು ಪತ್ತೆಯಾಗಿದೆ. ಒಂದೇ ಖಾತೆಗೆ ಹಣ ಜಮೆಯಾದರೇ ಆದಾಯ ತೆರಿಗೆ ಇಲಾಖೆ ಮತ್ತು ಆರ್‌ಬಿಐಗೆ ಮಾಹಿತಿ ಹೋಗಲಿದೆ ಎಂಬ ಕಾರಣಕ್ಕೆ ಹಲವು ಯುಪಿಎ ಖಾತೆಗಳನ್ನು ಬಳಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com