ಮಂಗಳೂರು: ಇಸ್ರೇಲ್ ನಲ್ಲಿ ನರಮೇಧ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಅಪ್ಲೋಡ್ ಮಾಡಿದ್ದ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಂಗಳೂರು ನಿವಾಸಿ ಜಾಕಿರ್ ಎಂಬಾತನನ್ನು ಬಂದರು ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಬಂದರು ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧನ ಮಾಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹಮಾಸ್ ಉಗ್ರರನ್ನು ಬೆಂಬಲಿಸಿ ಜಾಕಿರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಂದರು ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಸದಸ್ಯ ಪ್ರದೀಪ್ ಕುಮಾರ್ ದೂರು ದಾಖಲಿಸಿದ್ದರು. ಆನಂತರ, ಬಂದರು ಠಾಣೆ ಎಸ್ಐ ವಿನಾಯಕ ತೋರಗಲ್ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿ ವಿಶ್ವ ಖಬರಸ್ತಾನ್ ಸಂಘದ ಸದಸ್ಯ ಎಂದು ತಿಳಿದುಬಂದಿದೆ.
ಜಾಕೀರ್ ವಿಡಿಯೋ ಮೂಲಕ ಹಮಾಸ್ ಉಗ್ರರನ್ನು ದೇಶಪ್ರೇಮಿಗಳೆಂದು ಕರೆದಿದ್ದಲ್ಲದೆ, ಇವರ ಹೋರಾಟದ ವಿಜಯಕ್ಕಾಗಿ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದ. ಆಮೂಲಕ ಉಗ್ರರ ಪರವಾಗಿ ಹೇಳಿಕೆ ನೀಡಿದ್ದ. ಹೀಗಾಗಿ ಆತನ ವಿರುದ್ಧ ದೇಶದ್ರೋಹ ಮತ್ತು ಕೋಮು ಪ್ರಚೋದನೆ ಪ್ರಕರಣ ದಾಖಲಿಸುವಂತೆ ಹಿಂದು ಸಂಘಟನೆಗಳು ಒತ್ತಾಯ ಮಾಡಿದ್ದವು.
ಆತನಿಗೆ ಭಯೋತ್ಪಾದಕರೊಂದಿಗೆ ನಂಟು ಇದ್ದಂತೆ ತೋರುತ್ತಿದ್ದು, ದೇಶದ್ರೋಹದ ಆರೋಪದಲ್ಲಿ ಆತನನ್ನು ಬಂಧಿಸಬೇಕು ಎಂದು ಪ್ರದೀಪ್ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ದುಷ್ಪರಿಣಾಮ ಬೀರುವ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement