ರೈತರಿಗೆ ನಿತ್ಯ 5 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ರೈತರಿಗೆ ಕೃಷಿ ಪಂಪ್ ಸೆಟ್ ಬಳಕೆಗೆ ನಿತ್ಯ 5 ಗಂಟೆಗಳ ತಡೆರಹಿತ 3-ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ರೈತರಿಗೆ ಕೃಷಿ ಪಂಪ್ ಸೆಟ್ ಬಳಕೆಗೆ ನಿತ್ಯ 5 ಗಂಟೆಗಳ ತಡೆರಹಿತ 3-ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ತೀವ್ರ ವಿದ್ಯುತ್ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಈ ವೇಳೆ ಲಭ್ಯವಿರುವ ವಿದ್ಯುತ್ ದಕ್ಷವಾಗಿ ಹಂಚಿಕೆಯಾಗಬೇಕು. ಈ ನಿಟ್ಟಿನಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚಿನ ನಿಗಾವಹಿಸಿ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು  ಎಂದು ಸೂಚನೆ ನೀಡಿದರು.

ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್‌ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು. ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್‌ಗಳು ಫೀಲ್ಢ್‌ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಹೇಳಿದರು.

ನವೆಂಬರ್‌ನಿಂದ ಉತ್ತರ ಪ್ರದೇಶದಿಂದ 300 ಮೆ.ವ್ಯಾ., ಪಂಜಾಬ್‌ನಿಂದ 600 ಮೆ.ವ್ಯಾ. ವಿದ್ಯುತ್‌ ಪಡೆಯಲಾಗುವುದು. ಕೆ.ಇ.ಆರ್.ಸಿ.. ಅನುಮೋದನೆಯೊಂದಿಗೆ 1500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯವಾದ ಯೋಜನೆ, ಸಿದ್ಧತೆ ಏಕೆ ಮಾಡಿಕೊಂಡಿಲ್ಲ. ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ಈಗ ಮಳೆ ಇಲ್ಲದೆ ಉತ್ಪಾದನೆ ಕುಂಠಿತ ಆಗಿದೆ ಎನ್ನುವುದನ್ನು ನಮ್ಮ ರೈತರಿಗೆ ಮನವರಿಕೆ ಮಾಡಬೇಕು ಎಂದು ಸಿಎಂ ತಿಳಿಸಿದರು.

ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡು ಇರುವ ವಿದ್ಯುತ್ ಅನ್ನೇ ಅವರಿಗೆ ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ವಿದ್ಯುತ್ ಕಳ್ಳತನ ಮತ್ತು ವಿದ್ಯುತ್ ಸೋರಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ವಿಚಕ್ಷಣಾ ದಳದಲ್ಲಿ ಎಷ್ಟು SPಗಳು ಇದ್ದೀರಿ? ಏನು ಮಾಡುತ್ತಿದ್ದೀರಿ? ಇವರು ಎಷ್ಟು ವಿದ್ಯುತ್ ಕಳ್ಳತನ ಪತ್ತೆ ಹಚ್ಚಿದ್ದಾರೆ ಎನ್ನುವುದನ್ನು ನಿಗಾ ವಹಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಸೂಚನೆ ನೀಡಿ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ವಿದ್ಯುತ್‌ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆಗೆ ಸಂಬಂಧಿಸಿದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com