ಮಾಲಿನ್ಯಕಾರರಿಂದ ದಂಡ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ: ಸಚಿವ ಈಶ್ವರ್ ಖಂಡ್ರೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ) 2,900 ಕೋಟಿ ರೂಪಾಯಿ ದಂಡದ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ದಂಡದ ಹಣವನ್ನು ಸೂಕ್ತ ರೀತಿಯಲ್ಲಿ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆಯವರು ಸೋಮವಾರ ಹೇಳಿದರು.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ) 2,900 ಕೋಟಿ ರೂಪಾಯಿ ದಂಡದ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ದಂಡದ ಹಣವನ್ನು ಸೂಕ್ತ ರೀತಿಯಲ್ಲಿ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆಯವರು ಸೋಮವಾರ ಹೇಳಿದರು.

ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಿನ್ನೆಲೆಯಲ್ಲಿ 2022 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯ ಸರ್ಕಾರಕ್ಕೆ 2,900 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಈ ಹಣವನ್ನು ಮಾಲಿನ್ಯಕಾರರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಇದೂವರೆಗೆ ಕೇವಲ 4 ಕೋಟಿ ರೂಪಾಯಿಗಳನ್ನಷ್ಟೇ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆ ತ್ಯಾಜ್ಯ ನೀರನ್ನು ಹರಿಸುತ್ತಿರುವ 58 ವಸತಿ ಸಮುಚ್ಚಯಗಳಿಗೆ ತಲಾ ರೂ.3 ಕೋಟಿ ದಂಡ ವಿಧಿಸಿ, ಪ್ರತಿ ವಸತಿ ಸಮುಚ್ಚಯದಲ್ಲೂ ಎಸ್'ಟಿಪಿ ನಿರ್ಮಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶಿಸಿದೆ. 2024ರ ಡಿಸೆಂಬರ್ ಒಳಗಾಗಿ ಎಸ್'ಟಿಪಿ ಕಾರ್ಯ ಪೂರ್ಣಗೊಳಿಸುವಂತೆಯೂ ಗಡುವು ನೀಡಲಾಗಿದೆ. ಆದರೆ, ಈ ವರೆಗೆ ರೂ.4 ಕೋಟಿ ಮಾತ್ರ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ದಂಡ ವಸೂಲಿ ಜೊತೆಗೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ತಿಳಿಸಿದರು.

ಎಸ್‌ಟಿಪಿ ಸ್ಥಾಪನೆ ಮತ್ತು ಚಂದಾಪುರ ಕೆರೆಯ ಸುಧಾರಣೆಗೆ ಕೆಎಸ್‌ಪಿಸಿಬಿಯಿಂದ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಸರ್ಕಾರವು ನ್ಯಾಯಾಲಯಗಳಿಗೆ ತಿಳಿಸಿದೆ. ಆದರೆ, ಅದಕ್ಕಾಗಿ ಭೂಮಿ ಲಭ್ಯವಿಲ್ಲ ಎಂದು ಮಾಹಿತಿ ನೀಡಿದರು.

ವರ್ತೂರು ಕೆರೆಗೆ ಮತ್ತೆ ಕೊಳಚೆ ನೀರು ಸೇರುತ್ತಿರುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ. ತಾತ್ಕಾಲಿಕ ಪರಿಹಾರಗಳು ಕೆಲಸ ಮಾಡುವುದಿಲ್ಲ ಎಂದರು.

ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗಾಗಿ ನಗರದ ಹೊರವಲಯದಲ್ಲಿ ಹೂಳು ತುಂಬುವ ಸ್ಥಳಗಳನ್ನು ಸ್ಥಾಪಿಸುವ ಕುರಿತು ವ್ಯಕ್ತವಾಗುತ್ತಿರುವ ಕಳವಳ ಕುರಿತು ಮಾತನಾಡಿ, “ಇದು ಕೇವಲ ಪ್ರಸ್ತಾವನೆಯಾಗಿದೆ. ಯಾವುದೂ ಅಂತಿಮಗೊಂಡಿಲ್ಲ. ಅರಣ್ಯ ಭೂಮಿ ಮತ್ತು ಹಸಿರುಯುಕ್ತ ಸ್ಥಳವನ್ನು ರಕ್ಷಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕೈಗಾರಿಕೆಗಳ ಸ್ಥಾಪನೆಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸಲು, ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಸಮಯ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದರು.

ಹಸಿರು ವರ್ಗದ ಕೈಗಾರಿಕೆಗಳಿಗೆ 30 ದಿನಗಳಲ್ಲಿ, ಕಿತ್ತಳೆ ವರ್ಗದ ಕೈಗಾರಿಕೆಗಳಿಗೆ 45 ದಿನಗಳಲ್ಲಿ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ (ಸಿಮೆಂಟ್‌ನಂತಹ ಹೆಚ್ಚು ಮಾಲಿನ್ಯಕಾರಕ) ಮೂರು ತಿಂಗಳೊಳಗೆ ಅನುಮತಿ ನೀಡಬೇಕು. ಪ್ರಕ್ರಿಯೆಯ ಮೇಲ್ವಿಚಾರಣೆ ಮತ್ತು ಯಾವುದೇ ಸಮಸ್ಯೆಗಳಿಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಯನ್ನು ಕೂಡ ರಚಿಸಲಾಗುವುದು ಎಂದು ಹೇಳಿದರು.

ಹಸಿರು ಪಟಾಕಿಗಳ ಕುರಿತು ಮಾತನಾಡಿ, ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡುವ ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ಎಂದು ಹೇಳಿದರು.

ಇತರ ಪಟಾಕಿಗಳನ್ನು ತಯಾರಿಸುವ, ಮಾರಾಟ ಮಾಡುವ, ಸಾಗಿಸುವ ಮತ್ತು ಸಂಗ್ರಹಿಸುವವರ ವಿರುದ್ಧ ಪರಿಸರ ಮತ್ತು ವಾಯು ಕಾಯಿದೆಗಳ ಪ್ರಕಾರ ಪ್ರಕರಣಗಳನ್ನು ದಾಖಲಿಸಲಾಗುವುದು. ನಿಯಮಗಳು ರೂಪಿಸಿದ ಕೂಡಲೇ ಅದು ಕೆಲಸ ಮಾಡುವುದಿಲ್ಲ, ಕಟ್ಟುನಿಟ್ಟಾದ ಅನುಷ್ಠಾನ ಮತ್ತು ಎಲ್ಲರ ಸಹಕಾರದ ಅಗತ್ಯವಿರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com