ನಗರದಲ್ಲಿ ಸರಣಿ ಅಗ್ನಿ ಅವಘಡ: ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ತಪಾಸಣೆ ಆರಂಭ

ಇತ್ತೀಚೆಗೆ ನಡೆದ ಸರಣಿ ಅಗ್ನಿ ದುರಂತಗಳ ಹಿನ್ನೆಲೆಯಲ್ಲಿ ರಾಜಧಾನಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್, ಪಬ್ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿನ ಅಗ್ನಿ ಸುರಕ್ಷತೆ ಬಗ್ಗೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ವಿಶೇಷ ತಪಾಸಣೆ ಆರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ನಡೆದ ಸರಣಿ ಅಗ್ನಿ ದುರಂತಗಳ ಹಿನ್ನೆಲೆಯಲ್ಲಿ ರಾಜಧಾನಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್, ಪಬ್ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿನ ಅಗ್ನಿ ಸುರಕ್ಷತೆ ಬಗ್ಗೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ವಿಶೇಷ ತಪಾಸಣೆ ಆರಂಭಿಸಿದೆ.

ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಗೋದಾಮಿನ ಅಗ್ನಿ ಅವಘಡದಲ್ಲಿ 17 ಮಂದಿ ಸಾವನ್ನಪ್ಪಿದ್ದರೆ, ಕೋರಮಂಗಲದ ಮಡ್ ಪೈಪ್ ಕೆಫೆಯಲ್ಲಿ ಬುಧವಾರ ಅಗ್ನಿ ದುರಂತ ಸಂಬವಿಸಿತ್ತು. ಈ ಘಟನೆಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ವಾಣಿಜ್ಯ ಕೇಂದ್ರಗಳಲ್ಲಿ ಅಗ್ನಿ ಸುರಕ್ಷತೆ ತಪಾಸಣೆ ನಡೆಸುವಂತೆ ಅಗ್ನಿ ಶಾಮಕದಳ ಮತ್ತು ತುರ್ತು ಸೇವಗಳ ಇಲಾಖೆಗೆ ಸೂಚಿಸಿದ್ದರು.

ಅದರಂತೆ ಗುರುವಾರದಿಂದಲೇ ಜನರು ಸೇರುವ ಎಲ್ಲಾ ವಾಣಿಜ್ಯ ಕೇಂದ್ರಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.

ನಿನ್ನೆಯಷ್ಟೇ ಅಧಿಕಾರಿಗಳು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಪ್ರದೇಶದ ಹಲವಾರು ಹೋಟೆಲ್‌ಗಳು ಮತ್ತು ಪಬ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೈಗೊಂಡಿರುವ ಕುರಿತು ಪರಿಶೀಲನೆ ನಡೆಸಿದರು.

ನಗರದ ಎಲ್ಲಾ ರೆಸ್ಟೋರೆಂಟ್ ಗಳಲ್ಲಿ ಅಗ್ನಿ ಸುರಕ್ಷತೆ ಕುರಿತು ಅಗ್ನಿಶಾಮಕ ಇಲಾಖೆಯು ಪರಿಶೋಧನೆ ನಡೆಸುತ್ತಿದೆ. ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದು ವಿಶೇಷ ಕಾರ್ಯಾಚರಣೆಯಾಗಿದ್ದು, 4-5 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿದರು.

ತುರ್ತು ಸಂದರ್ಭಗಳಲ್ಲಿ ಜನರಿಗೆ ಜ್ಞಾನ ಮತ್ತು ಕೌಶಲ್ಯಗಳು ಹೊಂದಿರುವುದು ಬಹಳ ಮುಖ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತರಬೇತಿ ನೀಡಲು ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com