ಬೆಂಗಳೂರು: 29 ನಮ್ಮ ಕ್ಲಿನಿಕ್ ಗಳು ರಾತ್ರಿ 8 ಗಂಟೆವರೆಗೂ ಓಪನ್​!

ನಗರದಲ್ಲಿ ಸುಮಾರು 100 ನಮ್ಮ ಕ್ಲಿನಿಕ್ ಗಳು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿ ಸುಮಾರು ಎರಡು ತಿಂಗಳು ಕಳೆದರೂ, ಬಿಬಿಎಂಪಿ ಇನ್ನೂ 29 ಕ್ಲಿನಿಕ್‌ಗಳನ್ನು ಮಾತ್ರ ಗುರುತಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸುಮಾರು 100 ನಮ್ಮ ಕ್ಲಿನಿಕ್ ಗಳು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿ ಸುಮಾರು ಎರಡು ತಿಂಗಳು ಕಳೆದರೂ, ಬಿಬಿಎಂಪಿ ಇನ್ನೂ 29 ಕ್ಲಿನಿಕ್‌ಗಳನ್ನು ಮಾತ್ರ ಗುರುತಿಸಿದೆ.

ಆಗಸ್ಟ್ 4 ರಂದು ದೆಹಲಿಯ ಆಡಳಿತಾರೂಢ ಎಎಪಿ ಸರ್ಕಾರದ ‘ಮೊಹಲ್ಲಾ ಕ್ಲಿನಿಕ್ ಗಳಿಗೆ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿದ್ದರು. ಈ ಭೇಟಿ ಬಳಿಕ ನಮ್ಮ ಕ್ಲಿನಿಕ್ ಗಳ ಸಮಯ ಬದಲಾವಣೆ ಮಾಡಿ, ಜನಸ್ನೇಹಿ ಸ್ಪರ್ಶ ನೀಡಿದ್ದರು.

‘ನಮ್ಮ ಕ್ಲಿನಿಕ್’ಗಳ ಸಮಯವನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ನಮ್ಮ ಕ್ಲಿನಿಕ್ ಗಳ ಸಮಯವನ್ನು 12 ರಿಂದ ರಾತ್ರಿ 8 ರವರೆಗೆ ಬದಲಾಯಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಸ್ತುತ, ನಮ್ಮ ಕ್ಲಿನಿಕ್ ಗಳು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸುತ್ತಿವೆ. ನಮ್ಮ ಕ್ಲಿನಿಕ್ ಸಮಯ ಬದಲಾಯಿಸುವ ಕುರಿತು ಸೆಪ್ಟೆಂಬರ್ ಆರಂಭದವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶಗಳು ಬಿಬಿಎಂಪಿಗೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಮೊದಲ ಹಂತದಲ್ಲಿ ಬೆಂಗಳೂರಿನಾದ್ಯಂತ 29 ನಮ್ಮ ಕ್ಲಿನಿಕ್ ಗಳ ಸಮಯವನ್ನು ಬದಲಿಸಲಾಗಿದೆ. ಈ ಕ್ಲಿನಿಕ್ ಗಳು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಶೀಘ್ರದಲ್ಲೇ ಇತರೆ ಕ್ಲಿನಿಕ್ ಗಳ ಸಮಯವನ್ನು ಬದಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಹಿಂದೆ, ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಎಎಸ್ ಬಾಲಸುಂದರ್ ಅವರು ಆರೋಗ್ಯ ವ್ಯವಸ್ಥೆಯಲ್ಲಿದ್ದ ಮಾನವಶಕ್ತಿ ಕೊರತೆಯನ್ನು ಎತ್ತಿ ತೋರಿಸಿದ್ದರು.

ನಗರದ ಎಲ್ಲಾ 243 ನಮ್ಮ ಕ್ಲಿನಿಕ್ ಗಳ ಸಮಯವನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ನಮ್ಮ ಕ್ಲಿನಿಕ್ ಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಮಾನವಶಕ್ತಿಯನ್ನು ದ್ವಿಗುಣಗೊಳಿಸಬೇಕಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com