ವಿಭೂತಿಪುರ ಕೆರೆಗೆ ಬೇಲಿ ಹಾಕಿ, ಭದ್ರತಾ ಸಿಬ್ಬಂದಿಗಳ ನೇಮಿಸಿ: ಕೆರೆ ಕಾರ್ಯಕರ್ತರ ಆಗ್ರಹ

ಎಚ್‌ಎಎಲ್ ಬಳಿಯ ವಿಭೂತಿಪುರ ಕೆರೆಗೆ ಬೇಲಿ ಹಾಕಿ, ಭದ್ರತಾ ಸಿಬ್ಬಂದಿಗಳ ನೇಮಕ ಮಾಡುವಂತೆ ಕೆರೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ವಿಭೂತಿಪುರ ಕೆರೆ
ವಿಭೂತಿಪುರ ಕೆರೆ

ಬೆಂಗಳೂರು: ಎಚ್‌ಎಎಲ್ ಬಳಿಯ ವಿಭೂತಿಪುರ ಕೆರೆಗೆ ಬೇಲಿ ಹಾಕಿ, ಭದ್ರತಾ ಸಿಬ್ಬಂದಿಗಳ ನೇಮಕ ಮಾಡುವಂತೆ ಕೆರೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ಹಿಂದೆ 33 ವರ್ಷದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಕೆರೆ ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ತಲಕಾವೇರಿ ಲೇಔಟ್, ಬೃಂದಾವನ ಲೇಔಟ್, ವೀರಭದ್ರ ಲೇಔಟ್ ಮತ್ತು ಅನ್ನಸಂದ್ಯಾಪಾಳ್ಯ ನಿವಾಸಿಗಳು ಕೆರೆಯ ಸುತ್ತಮುತ್ತ ಸಿಸಿಟಿವಿ ಅಳವಡಿಸಿ, ಬ್ಯಾರಿಕೇಡ್‌ಗಳ ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

5 ವರ್ಷಗಳಲ್ಲಿ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆಯು 45 ಎಕರೆ ಪ್ರದೇಶದಲ್ಲಿದ್ದು, ಕೆರೆಯ ಸುತ್ತ ಭದ್ರತೆ ಒದಗಿಸಲು ಸಿಬ್ಬಂದಿಗಳ ನೇಮಿಸುವಂತೆ ಆಗ್ರಹಿಸಿದ್ದಾರೆ.

ವಿಭೂತಿಪುರ ಕೆರೆಸಂರಕ್ಷಣಾ ಸಮಿತಿಯ ಸದಸ್ಯೆ ಸತ್ಯವಾಣಿ ಶ್ರೀಧರ್ ಮಾತನಾಡಿ, ಕೆರೆಯ ಅಭಿವೃದ್ಧಿಗೆ ಈ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದರೂ ಸುರಕ್ಷತೆ ಇಲ್ಲದಂತಾಗಿದೆ. ಕೆರೆಯ ಸುತ್ತಲೂ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಕೆರೆಯ ಸುತ್ತಲೂ ಹಾಕಲಾಗಿದ್ದ ಬೇಲಿ ಹಾಳಾಗಿದೆ. ಬೇಲಿ ಮುರಿತವಾಗಿರುವುದರಿಂದ ಜಾನುವಾರುಗಳು ಕೆರೆಯ ಹತ್ತಿರಕ್ಕೆ ಸುಲಭವಾಗಿ ಹೋಗುವಂತಾಗಿದೆ. ಈ ಹಿಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳು ವರದಿಯಾಗಿತ್ತು. ಇದೀಗ ಮತ್ತೊಂದು ಘಟನೆ ವರದಿಯಾಗಿದೆ. ಯುವಕರು ಮತ್ತು ಮಾದಕ ವ್ಯಸನಿಗಳು ಕೆರೆ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆರೆಯ ಅಧಿಕಾರಿಗಳು ಮತ್ತು ಪೊಲೀಸರು ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಘಟನೆ ಬಳಿಕ ಬಿಬಿಎಂಪಿ ಲೇಕ್ ಎಂಜಿನಿಯರ್ ಸಪ್ನಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದರು.

ರೈಲು ಮಾರ್ಗಗಳನ್ನು ದಾಟುವಾಗ ಅನೇಕ ಜನರು ಸಾಯುತ್ತಾರೆ. ಹಾಗೆಂದು ಇಡೀ ರೈಲು ಮಾರ್ಗಕ್ಕೆ ಬ್ಯಾರಿಕೇಡ್ ಹಾಕಲು ಸಾಧ್ಯವೇ? ಇದೂ ಅದೇ ರೀತಿಯದ್ದೇ ಆಗಿದೆ. ಜನರು ಜಲಮೂಲದ ಬಳಿ ಹೋಗದಂತೆ ಜಾಗೃತರಾಗಿರಬೇಕು ಎಂದು ತಿಳಿಸಿದರು ಎಂದು ಆರೋಪಿಸಿದ್ದಾರೆ.

ಇದಷ್ಟೇ ಅಲ್ಲದೆ, ಕೆಲ ಮಾಂತ್ರಿಕರು ಕೆರೆಯ ಬಳಿಗೆ ಬಂದು ಹೂವು, ತೆಂಗಿನಕಾಯಿ, ವೀಳ್ಯದೆಲೆ ಎಸೆದ ಘಟನೆಗಳೂ ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com