ಬೆಂಗಳೂರಿನಲ್ಲಿ 97.90 ಲಕ್ಷ ಮತದಾರರು; 10 ತಿಂಗಳಲ್ಲಿ ಮತದಾರರ ಸಂಖ್ಯೆ 5.8 ಲಕ್ಷ ಹೆಚ್ಚಳ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 97.90 ಲಕ್ಷ ಮತದಾರರಿದ್ದು, ಕಳೆದ 10 ತಿಂಗಳಿನಲ್ಲಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5.80 ಲಕ್ಷ ಮತದಾರರು ಹೆಚ್ಚಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 97.90 ಲಕ್ಷ ಮತದಾರರಿದ್ದು, ಕಳೆದ 10 ತಿಂಗಳಿನಲ್ಲಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5.80 ಲಕ್ಷ ಮತದಾರರು ಹೆಚ್ಚಾಗಿದ್ದಾರೆ.

2024ನೇ ಸಾಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ವೇಲೆ  ಮಾತನಾಡಿದ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್.ರಾಮಚಂದ್ರನ್ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಶುಕ್ರವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಕರಡು ಮತದಾರರ ಪಟ್ಟಿಯನ್ನು CEO Karnataka website www.ceokarnataka.kar.nic.in website ಮತ್ತು ಬಿಬಿಎಂಪಿ www.bbmp.gov.inwebsite ನಲ್ಲಿ ಪರಿಶೀಲಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

2023ರ ಜನವರಿ 1ರಂದು ಪ್ರಕಟಿಸಿದ್ದ ಮತದಾರರ ಅಂತಿಮ ಪಟ್ಟಿಯಲ್ಲಿ 92,09,917 ಮತದಾರರಿದ್ದರು. ಅ.27ರಂದು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ಮತದಾರರ ಸಂಖ್ಯೆ 97,90,499 ರಷ್ಟಾಯಿತು. ಒಟ್ಟಾರೆ ಹತ್ತು ತಿಂಗಳ ಅವಧಿಯಲ್ಲಿ 5,80,582 ಮತದಾರರು ಹೆಚ್ಚಾಗಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಮತಗಟ್ಟೆಗಳ ಸಂಖ್ಯೆಯೂ 8,615 ರಿಂದ 8,982ಕ್ಕೆ ಹೆಚ್ಚಿಸಲಾಗಿದೆ. ಮತದಾರರ ನೋಂದಣಿಗಾಗಿ ವಿಶೇಷ ಅಭಿಯಾನವನ್ನೂ ನಡೆಸಲಾಗುತ್ತದೆ. ಸದ್ಯದಲ್ಲೇ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

17 ವರ್ಷ ತುಂಬಿದವರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅವಕಾಶವಿದ್ದು, ಜ.1, ಏ.1, ಜುಲೈ 1 ಮತ್ತು ಅ.1 ಅನ್ನು ಅರ್ಹತಾ ದಿನಗಳನ್ನಾಗಿ ನಿಗದಿಪಡಿಸಲಾಗಿದೆ.17 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಅ.27 ರಂದು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತದಾರಿಗೆ ಅ.27 ರಿಂದ ಡಿ.9 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ ಹಾಗೂ ಬಿ.ಎಲ್.ಓ ರವರುಗಳಿಗೆ ನಮೂನೆ-6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿ.9 ರವರೆಗೆ ಸಲ್ಲಿಸಬಹುದು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಮೂರು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದವರು ಶಿಕ್ಷಕರ ಕ್ಷೇತ್ರದ ಮತದಾರರಾಗಿ ಅರ್ಹರಾಗಲು ನಮೂನೆ-19 ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂತಿಮ ಪಟ್ಟಿಯನ್ನು ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ದಾಕ್ಷಾಯಿಣಿ, ಡಾ. ಕೆ. ಜಗದೀಶ್ ನಾಯ್ಕ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಅಜಯ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com