
ಬೆಂಗಳೂರು: ಅಭಿವೃದ್ಧಿ ಮತ್ತು ಇತರ ನವೀಕರಣಕ್ಕಾಗಿ ದಕ್ಷಿಣ ಬೆಂಗಳೂರಿನ ಬಸವನಗುಡಿಯ ಜೀವನಾಡಿ ಗಾಂಧಿಬಜಾರ್ ಮುಖ್ಯರಸ್ತೆಯನ್ನು ಮುಚ್ಚಲಾಗಿದ್ದು, ಒಂದು ವರ್ಷವಾದರೂ ಕಾಮಗಾರಿ ಕಾರ್ಯಗಳು ಇನ್ನೂ ಪುೂರ್ಣಗೊಂಡಿಲ್ಲ. ಇದರಿಂದ ಹೋಟೆಲ್ ಮಾಲೀಕರು ಹಾಗೂ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (ಬಿಬಿಎಚ್‌ಎ) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಶೀಘ್ರಗತಿಯಲ್ಲಿ ಕಾಮಗಾರಿ ಕಾರ್ಯಗಳ ಪೂರ್ಣಗೊಳಿಸಿ, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದೆ.
ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಅವರು ಸೆಪ್ಟೆಂಬರ್ 5ರಂದು ಬರೆದ ಉಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ‘ಗಾಂಧಿ ಬಜಾರ್ ರಸ್ತೆ ದುರಸ್ತಿ ಕಾಮಗಾರಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭಿಸಲಾಗಿತ್ತು.
50 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, 6 ತಿಂಗಳುಗಳ ಒಳಗಾಗಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಕಾಮಗಾರಿ ಆರಂಭವಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಇಲ್ಲಿರುವ ಸಾರ್ವಜನಿಕರು, ಕಚೇರಿಗಳು, ಮಾರಾಟಗಾರರು, ಹೋಟೆಲ್‌ಗಳು, ಬ್ಯಾಂಕ್‌ಗಳು ಮತ್ತು ಇತರರ ವ್ಯವಹಾರಗಳ ಮೇಲೆ ಪರಿಣಾಮ ಬೀರಿದೆ. ಸಂಚಾರಕ್ಕೆ ರಸ್ತೆಕ್ಕೂ ಸಮಸ್ಯೆಗಳಾಗುತ್ತಿವೆ. ನಿಧಾನಗತಿಯ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುವುದರ ಜೊತೆಗೆ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ, ಹಿರಿಯ ನಾಗರಿಕರು ಹಾಗೂ ದೈಹಿಕ ವಿಕಲಚೇತನರ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.
ಯೋಜನೆ ಮತ್ತು ಸಿದ್ಧತೆ ಕೊರತೆಯಿಂದ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿವೆ. ಈ ಅನಾನುಕೂಲತೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಮನಹರಿಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement