ಗಾಂಧಿ ಬಜಾರ್‌ನಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ: ಅಂಗಡಿ ಕಳೆದುಕೊಳ್ಳುವ ಭಯ, ಪಾಲಿಕೆ ಅಧಿಕಾರಿಗಳೊಂದಿಗೆ ವ್ಯಾಪಾರಿಗಳ ಸಂಘರ್ಷ
ಮಲ್ಟಿಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಗಾಂಧಿ ಬಜಾರ್‌ನಲ್ಲಿರುವ ಹಳೆಯ ಅಂಗಡಿಗಳನ್ನು ನೆಲಸಮಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 08th March 2023 01:12 PM | Last Updated: 08th March 2023 06:36 PM | A+A A-

ಅಂಗಡಿ ತೆರವುಗೊಳಿಸುತ್ತಿರುವ ಅಧಿಕಾರಿಗಳು.
ಬೆಂಗಳೂರು: ಮಲ್ಟಿಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಗಾಂಧಿ ಬಜಾರ್‌ನಲ್ಲಿರುವ ಹಳೆಯ ಅಂಗಡಿಗಳನ್ನು ನೆಲಸಮಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿಗಳ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ಇದಕ್ಕೆ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ತಮ್ಮ ಅಂಗಡಿಗಳನ್ನು ಮರುಹಂಚಿಕೆ ಮಾಡುವುದಾಗಿ ಬಿಬಿಎಂಪಿ ಆಯುಕ್ತರು ಲಿಖಿತ ಭರವಸೆ ನೀಡಬೇಕೆಂದು ಒತ್ತಾಯಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ, ಬಿಬಿಎಂಪಿಯು ನೆಲಮಾಳಿಗೆಯಲ್ಲಿ ಅಂಗಡಿಗಳೊಂದಿಗೆ ಮಲ್ಟಿಲೆವೆಲ್ ಕಾರ್ ಪಾರ್ಕ್ ನಿರ್ಮಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಒಂದೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ, ಅಕ್ರಮ ಒತ್ತುವರಿ ತೆರವು ಮಾಡಿದ BBMP
ಈ ಕುರಿತು ಗಾಂಧಿ ಬಜಾರ್ ವರ್ತಕರ ಸಂಘದ ಸದಸ್ಯ ಗೋಪಿನಾಥ್ ಅವರು ಮಾತನಾಡಿ, ಬಿಬಿಎಂಪಿಯು ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ (ಬಿಎಸ್‌ಸಿಎಲ್) ವರ್ಗಾಯಿಸಿದ್ದು, ಸೋಮವಾರ ಎರಡು ಅಂಗಡಿಗಳ ಗೋಡೆಗಳನ್ನು ಜೆಸಿಬಿ ಯಂತ್ರಗಳು ನೆಲಸಮಗೊಳಿಸಿವೆ. ದೂರು ಹಿಡಿದು ಜಂಟಿ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದ್ದೆವು. ಈ ನಡುವೆ ಇದ್ದಕ್ಕಿದ್ದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ್ದ ಹಿನ್ನೆಲೆಯಲ್ಲಿ ವಾಹನವನ್ನು ತಡೆಹಿಡಿಯಲಾಯಿತು. ಯೋಜನೆ ಪೂರ್ಣಗೊಂಡ ನಂತರ ಅಂಗಡಿಗಳ ಹಂಚಿಕೆ ಮಾಡುವುದಾಗಿ ತಿಳಿಸಿದರು. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತರು ಅಥವಾ ದಕ್ಷಿಣ ವಲಯದ ಜಂಟಿ ಆಯುಕ್ತರಿಂದಲೇ ಪತ್ರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು ಮಾತನಾಡಿ, ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದ್ದು, ತಕ್ಷಣ ಮಧ್ಯಪ್ರವೇಶಿಸುವ ಅಗತ್ಯವಿರುವುದರಿಂದ ಪಾಲಿಕೆಯು ಈ ಹಿಂದೆ 37 ಅಂಗಡಿಗಳಿಗೆ ನೋಟಿಸ್ ನೀಡಿತ್ತು. “ಬಿಎಸ್‌ಸಿಎಲ್ ಯೋಜನೆಯಡಿ ಬಹುಮಟ್ಟದ ಕಟ್ಟಡ ಬರಲಿದ್ದು, 180 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಯೋಜನೆಯು ನೆಲಮಾಳಿಗೆಯ ಮಟ್ಟದಲ್ಲಿ ಅಂಗಡಿಗಳನ್ನು ಹೊಂದಿದ್ದು, 20 ಕೋಟಿ ರೂಪಾಯಿ ವೆಚ್ಚದಲ್ಲಿ 47 ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿಯ ಆಪರೇಷನ್ ಡೆಮಾಲಿಷನ್: 5ನೇ ದಿನವೂ ಜೆಸಿಬಿಗಳ ಘರ್ಜನೆ; 11 ಕಡೆ ಒತ್ತುವರಿ ತೆರವು
ಬಿಬಿಎಂಪಿ ಟೆಂಡರ್ ಪ್ರಕ್ರಿಯೆಗೆ ಮುಂದಾಗುವುದರಿಂದ ಯೋಜನೆ ಪೂರ್ಣಗೊಂಡರೆ ಅಂಗಡಿಗಳು ಸಿಗುವುದಿಲ್ಲ ಎಂಬುದು ವ್ಯಾಪಾಸ್ಥರ ಆತಂಕವಾಗಿದೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಮಾತನಾಡಿ, ಅನೇಕ ವ್ಯಾಪಾರಿಗಳು ದಶಕಗಳಿಂದ ಬಾಡಿಗೆ ಪಾವತಿಸಿಲ್ಲ. ಹೀಗಾಗಿ ಕಠಿಣ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ.