ಒಂದೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ, ಅಕ್ರಮ ಒತ್ತುವರಿ ತೆರವು ಮಾಡಿದ BBMP

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಬೃಹತ್ ಬೆಂಗಳೂರು ಮಹಾನಗರ  ಪಾಲಿಕೆಯ ಜೆಸಿಬಿಗಳು ಕಾರ್ಯಾಚರಣೆಗಿಳಿದಿದ್ದು, ಒಂದೂವರ ತಿಂಗಳ ಬಳಿಕ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿವೆ.
ಮತ್ತೆ ಘರ್ಜಿಸಿದ ಜೆಸಿಬಿ
ಮತ್ತೆ ಘರ್ಜಿಸಿದ ಜೆಸಿಬಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಬೃಹತ್ ಬೆಂಗಳೂರು ಮಹಾನಗರ  ಪಾಲಿಕೆಯ ಜೆಸಿಬಿಗಳು ಕಾರ್ಯಾಚರಣೆಗಿಳಿದಿದ್ದು, ಒಂದೂವರ ತಿಂಗಳ ಬಳಿಕ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿವೆ.

ಹೌದು.. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿದ್ದು, ಅನೇಕ ಕಡೆಗಳಲ್ಲಿ ಬುಲ್ಡೋಜರ್‌ಗಳು ಸದ್ದು ಮಾಡಿವೆ. ಒಟ್ಟು ಆರು ಕಡೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಪಾಲಿಕೆಯು ಅಕ್ಟೋಬರ್ 10 ರಂದು ಚಾಲನೆಯನ್ನು ಸ್ಥಗಿತಗೊಳಿಸಿತ್ತು. ಪಾಲಿಕೆ ಸರ್ವೆ ವಿವರ ಹಾಗೂ ಬೆಂಗಳೂರು ಪೂರ್ವ ತಹಶೀಲ್ದಾರ್ ನಾಗ ಪ್ರಶಾಂತ್ ಅವರ ವಿಚಾರಣೆಗಾಗಿ ಕಾಯುತ್ತಿದ್ದರು. 1964ರ ಭೂಕಂದಾಯ ಕಾಯಿದೆ ಸೆಕ್ಷನ್ 104 ಮತ್ತು ವಿಪತ್ತು ನಿರ್ವಹಣಾ ಕಾಯಿದೆ, 2005ರ ಅಡಿಯಲ್ಲಿ ನೆಲಸಮ ಮಾಡಲು ಬಿಬಿಎಂಪಿಯು ಡಿಸೆಂಬರ್ 13ರಂದು ತಹಶೀಲ್ದಾರ್‌ರ ಅನುಮತಿ ಪಡೆದ ನಂತರ ಈ ತಡೆಯನ್ನು ಕೋರ್ಟ್ ತೆರವು ಮಾಡಿದ ನಂತರ ಮತ್ತೆ ಒತ್ತು ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.

ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯದ ಮುನ್ನೇನಕೊಳಲು, ಶಾಂತಿನಿಕೇತನ ಲೇಔಟ್ ಹಾಗೂ ಎಬಿಕೆ ಹಳ್ಳಿಯಲ್ಲಿ ಆರು ಒತ್ತುವರಿಗಳ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು. ಮುನ್ನೇನಕೊಳಲು ಹಾಗೂ ಶಾಂತಿನಿಕೇತನ ಲೇಔಟ್ ನಲ್ಲಿ 30x40 ಅಡಿ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದೇ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ ಎರಡು ಶೆಡ್‌ಗಳನ್ನು ಸಹ ಅಧಿಕಾರಿಗಳು ಖುದ್ದು ಮುಂದೆ ನಿಂತು ತೆರವು ಮಾಡಿದ್ದಾರೆ. ಇತ್ತ ಅಮಾನಿ ಬೆಳ್ಳಂದೂರು ಖಾನೆ (ಎಬಿಕೆ) ಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ನಿರ್ಮಿಸಿದ್ದ ಒಂದು ಶೆಡ್ ಹಾಗೂ ಸುಮಾರು 60 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ನೆಲಸಮಗೊಳಿಸಲಾಗಿದೆ. 

ನೋಟಿಸ್ ಜಾರಿ ಮಾಡಿದ್ದ ಅಧಿಕಾರಿಗಳು
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿತ್ತು. ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ಬಳಿಕ ಗುರುತಿಸಲಾಗಿದ್ದ ಬಾಕಿ ಒತ್ತುವರಿಗಳ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಸಂಬಂಧ ಇತ್ತೀಚೆಗಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ರಾಜಕಾಲುವೆ ಸೇರಿದಂತೆ ಬೃಹತ್ ನೀರುಗಾಲುವೆಗಳನ್ನು ತೆರವು ತ್ವರಿತಗತಿಯಲ್ಲಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹದೇವಪುರ ವ್ಯಾಪ್ತಿಯಲ್ಲಿ 2015-16ರಿಂದ ಇದುವರೆಗೆ ಒಟ್ಟಾರೆ 1,174 ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1,032 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. 142 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದೆ. ಈ ಪೈಕಿ 11 ಪ್ರಕರಣಗಳು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದೆ. ಇನ್ನು 131 ಒತ್ತುವರಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯವನ್ನು ನಡೆಸುತ್ತಿದೆ. ರಾಜಕಾಲುಚವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.

ಮಾಜಿ ಸೈನಿಕನ ಮನೆಯೂ ತೆರವು
ಅತಿಕ್ರಮಣ ತೆರವು ಆದೇಶ ಬಂದ ನಂತರ ಬಿಬಿಎಂಪಿ ಮಾಜಿ ಸೈನಿಕರಾದ ಆರ್‌ಕೆ ಮಂಡಲ್ ಮತ್ತು ಎಸ್‌ಕೆ ಭಟ್ಟಾಚಾರ್ಯ ಅವರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿತ್ತು. ಗುರುವಾರ ಅವರ ಮನೆಗಳನ್ನು ಪೊಲೀಸ್ ರಕ್ಷಣೆಯಲ್ಲಿ ಕೆಡವಲಾಯಿತು. ಭಟ್ಟಾಚಾರ್ಯ ಅವರು ಕೆಡವುವ ಮೊದಲು ತಮ್ಮ "ಕನಸಿನ ಮನೆ" ಯ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡರು. “ಬುಧವಾರ, ನಾನು ನನ್ನ ಮನೆ ಕಟ್ಟಲು ತೆಗೆದುಕೊಂಡಿದ್ದ ಸಾಲವನ್ನು ತೆರವುಗೊಳಿಸಿದೆ ಮತ್ತು ಇಂದು ಅದು ನೆಲಸಮವಾಗಿದೆ. ನಾನು 1996 ರಿಂದ ಇಲ್ಲಿಯೇ ಉಳಿದುಕೊಂಡು ತೆರಿಗೆ ಪಾವತಿಸಿದ್ದೇನೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಇದೇ ಕಾರ್ಯಾಚರಣೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ತಮ್ಮ ಅರ್ಧದಷ್ಟು ಮನೆಯ ಜಾಗ ಕಳೆದುಕೊಂಡಿರುವ ಆಸ್ತಿ ಮಾಲೀಕ ಹೇಮಂತ್ ಕುಮಾರ್, ತೆರವು ಕಾರ್ಯಾಚರಣೆ ರಾಜಕೀಯ ಷಡ್ಯಂತ್ರವಾಗಿದ್ದು, ನಿರ್ದಿಷ್ಟ ಪಕ್ಷದ ಆಜ್ಞೆಯ ಮೇರೆಗೆ ಮನೆಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಧಿಕಾರಿಗಳು ಪೂರ್ಣ ಪ್ರಮಾಣದ ನಕ್ಷೆ ಒದಗಿಸಿ ನಂತರ ಕಾರ್ಯಾಚರಣೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು. ಆದರೆ ಈ ವೇಳೆ ಸರ್ವೆ ನಡೆಸಲಾಗಿದ್ದು, ತಾಸೀಲ್ದಾರ್ ಅವರ ವಿಚಾರಣೆ ಮತ್ತು ಆದೇಶದ ನಂತರವೇ ಸರ್ವೆ ಸಂಖ್ಯೆ 89 ರಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಮಹದೇವಪುರ) ರಾಘವೇಂದ್ರ ಬಿ.ಎನ್ ಸ್ಪಷ್ಟಪಡಿಸಿದರು.

“ಎರಡು ಮನೆಗಳು ಮತ್ತು ಎರಡು ಶೆಡ್‌ಗಳನ್ನು ನೆಲಸಮ ಮಾಡಲಾಗಿದೆ. ಈ ಮನೆಗಳ ನಿರ್ಮಾಣ ಮಳೆನೀರಿನ ಚರಂಡಿ ಮೇಲೆ ನಿರ್ಮಾಣವಾಗಿವೆ. ಕಾರ್ಯಾಚರಣೆಯಲ್ಲಿ ಯಾವುದೇ ದೋಷಗಳಿಲ್ಲ.. ಪಾರದರ್ಶಕವಾಗಿ ಮಾಡಲಾಗಿದೆ ಎಂದು ಅವರು ಆರೋಪಗಳನ್ನು ತಳ್ಳಿಹಾಕಿದರು. ಮೂರು ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಯಲಹಂಕ ವಲಯದಲ್ಲಿ ಎಸ್‌ಡಬ್ಲ್ಯೂಡಿಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಸೆಂಬರ್ 28 ರೊಳಗೆ ಉಳಿದ ಬಿಬಿಎಂಪಿ ವಲಯಗಳಲ್ಲಿ ಇದನ್ನು ಪೂರ್ಣಗೊಳಿಸಿ ಕಟ್ಟಡವನ್ನು ಕೆಡವುವ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com