ಬೆಂಗಳೂರು: ಕಸ್ತೂರಬಾ ರಸ್ತೆಯಲ್ಲಿರುವ ಬೆಂಗಳೂರು ಕೇಂದ್ರ ಉಪ ಪೊಲೀಸ್ ಆಯುಕ್ತರ ಕಚೇರಿಯ ಪಕ್ಕದಲ್ಲಿ ಪೊಲೀಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಘದ ಅಧ್ಯಕ್ಷ ಎಸ್ ಉಮೇಶ್ ಅವರು ಮಾತನಾಡಿ, ಕಬ್ಬನ್ ಪಾರ್ಕ್ 190 ಎಕರೆಗಳ ಭೂಮಿಯಲ್ಲಿದ್ದು, ಇದರಲ್ಲಿ ಅನೇಕ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಿವೆ. ಹೊಸ ಕಟ್ಟಡಕ್ಕೆ ವಿರೋಧ ವ್ಯಕ್ತಪಡಿಸದೇ ಹೋದಲ್ಲಿ ಈಗಿರುವ ಪರಿಸರ ನಾಶವಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಸಂಘವು ಸಮಾನ ವಯಸ್ಕ ಜನರು, ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡುತ್ತದೆ. ಉದ್ಯಾನವನದಲ್ಲಿ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದರ ವಿರುದ್ಧ ಪ್ರತಿಭಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಚುನಾವಣಾ ಆಯೋಗದ ಹಳೆ ಕಟ್ಟಡದಲ್ಲಿ ಒಂಬತ್ತು ಮಹಡಿಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇದೀಗ ಮತ್ತೊಂದು ಪಿಐಎಲ್ ಸಲ್ಲಿಸುವುದಾಗಿ ಹೇಳಿದ್ದಾರೆ.
ಈ ನಡುವೆ ಕಬ್ಬನ್ ಪಾರ್ಕ್ ಜಾಗವನ್ನು ಪೊಲೀಸ್ ಠಾಣೆ ಕಾಂಪ್ಲೆಕ್ಸ್ ನಿರ್ಮಿಸಲು ಬಳಸಲಾಗುತ್ತಿದೆ ಎಂಬ ಆರೋಪವನ್ನು ತೋಟಗಾರಿಕಾ ಇಲಾಖೆ ನಿರಾಕರಿಸಿದೆ.
ಬಾಲಭವನ, ವೈಎಂಸಿಎ ಮತ್ತು ಸೆಂಚುರಿ ಕ್ಲಬ್ ಕಬ್ಬನ್ ಪಾರ್ಕ್‌ನ ಮಿತಿಯಲ್ಲಿವೆ, ಆದರೆ, ಪೊಲೀಸ್ ಠಾಣೆಯಂತಹ ಇತರ ಕಟ್ಟಡಗಳು ನಮ್ಮ ಮಿತಿಯಲ್ಲಿಲ್ಲ. ಆದರೆ, ಕಟ್ಟಡದ ನಿಯಮಾವಳಿ ಅವರಿಗೂ ಅನ್ವಯಿಸುತ್ತದೆ. ಯಾವುದೇ ಕಟ್ಟಡವು ವಿಧಾನಸೌಧಕ್ಕಿಂತ ಎತ್ತರವಾಗಿರಬಾರದು. ಬೇಸ್ ಮೆಂಟ್ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು’ ಎಂದು ಡಾ.ಎಂ.ಜಗದೀಶ್ ಅವರು ಹೇಳಿದ್ದಾರೆ.
ಈ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, ಪೊಲೀಸರು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಮಂಜೂರಾತಿಯಂತೆಯೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸ ಕಾಂಪ್ಲೆಕ್ಸ್ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ್ದಾರೆ.
Advertisement