ಬೆಂಗಳೂರು: ರಾಜ್ಯದಲ್ಲಿ ಪ್ರತಿ ಮಳೆಗಾಲಕ್ಕೂ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಕಾವೇರಿ ನೀರು ಹರಿಸಿದರೂ ಇನ್ನೂ ಬೇಕು...ಇನ್ನೂ ಬೇಕು ಎನ್ನುವ ದುರಾಸೆ ಮಾತ್ರ ತಮಿಳುನಾಡು ಸರ್ಕಾರಕ್ಕೆ ಹೋಗಿಲ್ಲ. ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬಾರದಿರುವುದರಿಂದ ಕಾವೇರಿ ಜಲಾಶಯದಲ್ಲಿ ನೀರಿನ ಶೇಕರಣೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ರಾಜ್ಯ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಇದರ ನಡುವಲ್ಲೇ ತಮಿಳುನಾಡು ಸರ್ಕಾರ ತನ್ನ ಒತ್ತಾಯದ ಮೂಲಕ ತಲೆ ಬಿಸಿಯಾಗುವಂತೆ ಮಾಡುತ್ತಿದೆ.
ಒತ್ತಡದ ನಡುವಲ್ಲೇ ನ್ಯಾಯಾಲಯದ ಆದೇಶಕ್ಕೆ ಕಟ್ಟುಬಿದ್ದಿರುವ ರಾಜ್ಯ ಸರ್ಕಾರ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಇದಕ್ಕೆ ರೈತರು, ವಿಪಕ್ಷಗಳ ನಾಯಕರು ಸೇರಿದಂತೆ ರಾಜ್ಯದಾದ್ಯಂತ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಈ ನಡುವಲ್ಲೇ ತಮಿಳುನಾಡಿಗೆ ಪ್ರತೀನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ರಾಜ್ಯದಲ್ಲಿ ಬೆಳೆಗಳಿಗೆ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಶುರುವಾಗಿದೆ.
ಪರಿಣಾಮ ಪರಿಸ್ಥಿತಿಯ ಗಂಭೀರ ಅರಿತ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಇದೀಗ 3,000 ಕ್ಯೂಸೆಕ್‌ಗೆ ಇಳಿಸಿದ್ದು, ಇದು ತಮಿಳುನಾಡು ಸರ್ಕಾರದ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಶನಿವಾರ ಬೆಳಿಗ್ಗೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ 2,787 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಇದಕ್ಕೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಸೆ.12ರಂದು ಸಭೆ ನಡೆಯಲಿರುವ ಕಾವೇರಿ ನೀರು ನಿಯಂತ್ರಣ ಸಮಿತಿಗೆ ದೂರು ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸಮಿತಿಯ ಆದೇಶದಂತೆ ಕರ್ನಾಟಕ ಸರ್ಕಾರ ಸೆಪ್ಟೆಂಬರ್ 12 ರವರೆಗೆ ಪ್ರತಿದಿನ 5,000 ಕ್ಯೂಸೆಕ್ ಬಿಡುಗಡೆ ಮಾಡಬೇಕಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಕರ್ನಾಟಕ ಗೌರವಿಸುತ್ತಿಲ್ಲ. ಈ ಬೆಳವಣಿಗೆಯನ್ನು ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಸೆಪ್ಟೆಂಬರ್ 21 ರಂದು ವಿಚಾರಣೆ ನಡೆಸಲಿದೆ.
ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಸಂಸ್ಥಾಪಕ ಡಾ ಎಸ್ ರಾಮದಾಸ್ ಅವರು ಮಾತನಾಡಿ, ಸೆಪ್ಟೆಂಬರ್ 12 ರವರೆಗೆ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ. ತಮಿಳುನಾಡು ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಮೊರೆ ಹೋಗಬೇಕು. ಬೆಳೆಗಳನ್ನು ಉಳಿಸಲು ಸೆಪ್ಟೆಂಬರ್ 21 ರೊಳಗೆ ದಿನಕ್ಕೆ ಕನಿಷ್ಠ 15,000 ಕ್ಯೂಸೆಕ್ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು. ಕರ್ನಾಟಕದ ಜಲಾಶಯಗಳಲ್ಲಿ 64 ಟಿಎಂಸಿ ಅಡಿ ನೀರು ಇರುವುದರಿಂದ ತಮಿಳುನಾಡಿಗೆ 20 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
Advertisement