ಅಸಾಧ್ಯವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ; ಖಾಸಗಿ ಬಸ್ ಗಳ ನಷ್ಟ ತುಂಬಿಕೊಡಲು ಆಗಲ್ಲ: ಸಿಎಂ ಸಿದ್ದರಾಮಯ್ಯ

‘ಶಕ್ತಿ’ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ನಡೆಸಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಮೈಸೂರು: ‘ಶಕ್ತಿ’ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಆಟೋ, ಕ್ಯಾಬ್, ಸೇರಿದಂತೆ ಸಾವಿರಾರು ಖಾಸಗಿ ವಾಹನಗಳು ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಕೆಲವೆಡೆ ಪ್ರಯಾಣಿಕರು ಪರದಾಡುವಂತಾಯಿತು. 

ಈ ಬಂದ್ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರಿಗೆ ಅನುಕೂಲವಾಗಲಿ ಎಂದು 'ಶಕ್ತಿ' ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಖಾಸಗಿ ಬಸ್ ನವರು ನಷ್ಟ ಎನ್ನುತ್ತಿದ್ದಾರೆ. ಆ ನಷ್ಟವನ್ನು ತುಂಬಿಕೊಡಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಖಾಸಗಿಯವರಿಗೆ ಆಗುವ ನಷ್ಟ ತುಂಬಿಕೊಡಲು ಆಗಲ್ಲ. ಅಸಾಧ್ಯವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಆದರೆ, ಯಾವುದೇ ತೊಂದರೆಯಾಗದೆ ಶಾಂತಯುತವಾಗಿ ಪ್ರತಿಭಟನೆ ಮಾಡಲಿ ಎಂದು ಅವರು ತಿಳಿಸಿದ್ದಾರೆ. 

ಮತ್ತೊಂದೆಡೆ ಬೆಂಗಳೂರಿನಲ್ಲಿ  ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಖಾಸಗಿ ಸಾರಿಗೆ ಒಕ್ಕೂಟಗಳಿಂದ ನಡೆಸಲಾಗುತ್ತಿರುವ ಬಂದ್ ರಾಜಕೀಯ  ಪ್ರೇರಿತವಾಗಿದ್ದು, ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದಲೂ ಸಾರಿಗೆ ಸಂಸ್ಥೆಗಳ ಬೇಡಿಕೆಗಳಿವೆ. ಕಾಂಗ್ರೆಸ್ ಸರ್ಕಾರ ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ಜಾರಿಗೆ ತಂದಿದೆ. ಖಾಸಗಿಯವರ ಬೇಡಿಕೆ ಈಡೇರಿಕೆ ಸಂಬಂಧ ಯಾರೋ ಅಧಿಕಾರಿ ಏನೋ ಹೇಳಿದ್ದಾರೆ ಎಂದು ಸಿಎಂ ಜೊತೆಗಿನ ಸಭೆಯಲ್ಲಿ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿಲ್ಲ. ಕಾನಾನೂತ್ಮ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 

ಕೆಲವು ಪ್ರಕರಣಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿದ್ದು, ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು, ಆದರೆ, ಶಕ್ತಿ ಯೋಜನೆಯಿಂದ ಆಗುವ ನಷ್ಟವನ್ನು ಪ್ರಾಯೋಗಿಕವಾಗಿ ಭರಿಸಲು ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com