ಬಯಸದೇ ಬಂದ ಭಾಗ್ಯ: ಕೆಲವೇ ಕ್ಷಣಗಳಲ್ಲಿ ಸಿಕ್ಕಿತು 94 ಲಕ್ಷ ರೂ.; ತಪ್ಪು ನಿರ್ಧಾರದಿಂದ ಜೈಲು ಪಾಲಾದ ಬ್ಯಾಂಕ್ ಸಿಬ್ಬಂದಿ!

ಕೆಲವೇ ಕೆಲವು ಸೆಕೆಂಡ್​​​​​ನಲ್ಲಿ ಲಕ್ಷಾಧಿಪತಿಯಾಗಿಬಿಟ್ಟಿದ್ದ ಯುವಕನ ಕತೆ ಇದು. ಬರಿಗೈನಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ರೂ. ಹಣ ಸಿಕ್ಕಿದೆ ತಡ ಏನು ಮಾಡಬೇಕು ಎಂದು ತೋಚದೆ ರು ದಿನಗಳ ಕಾಲ ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದಾನೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಲವೇ ಕೆಲವು ಸೆಕೆಂಡ್​​​​​ನಲ್ಲಿ ಲಕ್ಷಾಧಿಪತಿಯಾಗಿಬಿಟ್ಟಿದ್ದ ಯುವಕನ ಕತೆ ಇದು. ಬರಿಗೈನಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ರೂ. ಹಣ ಸಿಕ್ಕಿದೆ ತಡ ಏನು ಮಾಡಬೇಕು ಎಂದು ತೋಚದೆ ರು ದಿನಗಳ ಕಾಲ ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಕೊನೆಗೂ ಯುವಕ ಪೊಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬವರು ಸೈಟ್ ಖರೀದಿಸಲು 94 ಲಕ್ಷ ರೂ. ಕೂಡಿಸಿಟ್ಟಿದ್ದರು. ಅದನ್ನು ಎಣಿಸಲು ಸ್ನೇಹಿತನ ಅಂಗಡಿಗೆ ಹಣ ತೆಗೆದುಕೊಂಡು ಹೋಗಲು ಮುಂದಾಗಿದ್ದರು. ಅಲ್ಲದೇ ವಕೀಲರ ಕಚೇರಿಗೆ ತೆರಳಲೂ ರೆಡಿಯಾಗಿದ್ದರು. ಮನೆಯಿಂದ ಬ್ಯಾಗ್‌ನಲ್ಲಿ ದಾಖಲೆಗಳು ಹಾಗೂ ಬಾಕ್ಸ್‌ನಲ್ಲಿ ಹಣ ಹಾಕಿಕೊಂಡು ಹೊರಟಿದ್ದರು.

ಮನೆ ಕೆಳಗೆ ಬಂದು ಕಾರಿನ ಡೋರ್ ಓಪನ್ ಮಾಡಲೆಂದು ಕೈಯಲ್ಲಿದ್ದ ಹಣದ ಬ್ಯಾಗನ್ನು ಪಕ್ಕದಲ್ಲಿದ್ದ ಯಾರದೋ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದರು. ನಂತರ ಕಾರಿನ ಬಾಗಿಲು ತೆಗೆದು ದಾಖಲಾತಿ ಇದ್ದ ಬ್ಯಾಗ್ ಕಾರಿನಲ್ಲಿ ಹಾಕಿಕೊಂಡು, ಹಣದ ಬಾಕ್ಸ್‌ ಹಾಗೇ ಮರೆತು ಡ್ರೈವಿಂಗ್‌ ಸೀಟಿನತ್ತ ಬಂದು ಕುಳಿತು ಕಾರು ಚಲಾಯಿಸಿಕೊಂಡು ಹೋಗಿದ್ದರು.

ಬೈಕ್ ಮಾಲೀಕ, ಖಾಸಗಿ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವ ವರುಣ್ ಗೌಡ ಎಂಬಾತ ಬೈಕ್ ಬಳಿಗೆ ಬಂದು ನೋಡಿದಾಗ ಬೈಕ್‌ ಮೇಲೆ ಬಾಕ್ಸ್‌ ಕಂಡಿತ್ತು. ಬಾಕ್ಸ್ ಓಪನ್ ಮಾಡಿದಾಗ ಕಂತೆ ಕಂತೆ ಹಣ ಕಂಡಿತ್ತು. ಕೂಡಲೇ ಮನ ಚಂಚಲಗೊಂಡು, ಹಣದ ಸಮೇತ ಸ್ಥಳದಿಂದ ವರುಣ್‌ ಎಸ್ಕೇಪ್ ಆಗಿದ್ದ. ಶ್ರೀನಗರದ ತನ್ನ ಮನೆಯಲ್ಲಿ ಹಣವನ್ನು ಹಾಗೇ ಇಟ್ಟುಕೊಂಡಿದ್ದ. 94 ಲಕ್ಷ ರೂ. ಹಣ ಏನು ಮಾಡಬೇಕು ಅನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದ. ಅದನ್ನು ಪೊಲೀಸರಿಗೆ ಒಪ್ಪಿಸುವುದು ಒಳ್ಳೆಯದೆಂದು ಅವನ ತಾಯಿ ಹೇಳಿದರೂ ಸಹ, ಸೆಕೆಂಡ್ ಹ್ಯಾಂಡ್ SUV ಕಾರು ಖರೀದಿಗೂ ಪ್ಲಾನ್ ಮಾಡಿಕೊಂಡಿದ್ದ. ಹೀಗಾಗಿ 5 ಸಾವಿರ ರು ಹಣವನ್ನು ಅಡ್ವಾನ್ಸ್ ಆಗಿ ಕೊಟ್ಟಿದ್ದ.

ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್‌ಗೆ ಶಾಕ್ ಆಗಿದ್ದು, ವಾಪಸ್ಸು ಬಂದು ನೋಡಿದಾಗ ಬೈಕ್, ಹಣ ಎರಡೂ ಇರಲಿಲ್ಲ. ಬಳಿಕ‌ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಮಾರ್ಗದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 300ಕ್ಕೂ ಹೆಚ್ಚು ಕ್ಯಾಮರಾ ಪರಿಶೀಲಿಸಿ ಪ್ರಕರಣ ಬೇಧಿಸಿದ್ದಾರೆ. ಕೊನೆಗೂ ಆರೋಪಿಯನ್ನು ಹಿಡಿದು 94 ಲಕ್ಷ ರೂ. ಹಣ ರಿಕವರಿ ಮಾಡಿದ್ದಾರೆ. ವರುಣ್ ತಾನಾಗಿಯೇ ಆ ಹಣ ತಂದು ಪೊಲೀಸರಿಗೆ ಕೊಟ್ಟಿದ್ದರೆ ಹೀರೋ ಆಗುತ್ತಿದ್ದ. ಆದರೆ ಮನೆಯಲ್ಲಿ ಹಣ ಇಟ್ಟುಕೊಂಡು ಈಗ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com