ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಇರುವ ಎಲ್ಲಾ ಕಲ್ಯಾಣಿಗಳಲ್ಲಿ 80 ಮಂದಿ ಈಜುಗಾರರನ್ನು ನಿಯೋಜಿಸಲಾಗಿದೆ.
ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಸೇರಿದಂತೆ 39 ಕಲ್ಯಾಣಿಗಳಲ್ಲಿ ಸೆಪ್ಟೆಂಬರ್ 18ರಿಂದ ಗಣೇಶ ಮೂರ್ತಿ ವಿಸರ್ಜನೆ ಆರಂಭವಾಗಲಿದೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಬ್ಯಾರಿಕೇಡ್ ಗಳ ಹಾಕುವ ಜೊತೆಗೆ ಇತರೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 39 ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳು, 418 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಮಾಡಲಾಗಿದೆ. ಈ ಮೊಬೈಲ್ ಟ್ಯಾಂಕ್ ಗಳು ನಾಗರಿಕರ ಅನುಕೂಲಕ್ಕಾಗಿ ಎಲ್ಲಾ 27 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ನಗರದಾದ್ಯಂತ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.
ಪಾಲಿಕೆ ನಿರ್ದೇಶನದಂತೆ 5 ಇಂಚುಗಳಿಂದ 3 ಅಡಿ ಎತ್ತರದವರೆಗಿನ ಎಲ್ಲಾ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜನೆಗೊಳಿಸಬೇಕಿದೆ. ಈಗಾಗಲೇ ಪಿಒಪಿ ಗಣೇಶ ಮೂರ್ತಿಗಳ ಮೇಲೆ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
Advertisement