ಬೆಂಗಳೂರು: ಹಿಂದೂ ಧರ್ಮೀಯರ ಪವಿತ್ರ ದೊಡ್ಡ ಹಬ್ಬ ಗೌರಿ-ಗಣೇಶ ಚತುರ್ಥಿಯನ್ನು ಇಂದು ಸೋಮವಾರ ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.
ಮುಂಜಾನೆಯೇ ಮನೆಯಲ್ಲಿ ಹೆಂಗಳೆಯರು ಮಕ್ಕಳು ಎದ್ದು ಮನೆ ಮುಂದೆ ಸಾರಿಸಿ ರಂಗೋಲಿ ಬಳಿದು ತೋರಣ ಕಟ್ಟಿ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ. ಬೆಳಗ್ಗೆಯೇ ಸ್ನಾನ ಮಾಡಿ ದೇವರ ಮನೆಯಲ್ಲಿ ಗಣೇಶ ಮೂರ್ತಿ ಇಟ್ಟು ಅಲಂಕಾರ ಮಾಡಿ, ನೈವೇದ್ಯ ಮಾಡಿ ಗೌರಿ-ಗಣೇಶ ಸ್ತೋತ್ರ, ದೇವರ ನಾಮ, ಅಷ್ಟೋತ್ತರಗಳನ್ನು ಮನೆಯವರೆಲ್ಲಾ ಸೇರಿ ಹೇಳಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದಾರೆ.
ಈ ಬಾರಿ ಗೌರಿ ಗಣೇಶ ಹಬ್ಬ ಒಟ್ಟಿಗೆ ಬಂದಿದೆ. ಹಾಗಾಗಿ ಹಲವು ಕಡೆಗಳಲ್ಲಿ ಇಂದು ಗೌರಿ ಗಣೇಶ ಹಬ್ಬವನ್ನು ಆಚರಿಸಿದರೆ ಕರಾವಳಿ, ಮಲೆನಾಡು ಭಾಗಗಳಲ್ಲಿ ನಾಳೆ ಗಣಪತಿ ಹೋಮ, ಪೂಜೆ ಮಾಡುತ್ತಾರೆ.
ಒಂದಷ್ಟು ಕಡೆಗಳಲ್ಲಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನ ವಿತರಿಸುವ ಕೆಲಸ ಕೂಡ ನಡೆದಿದ್ದು, ಗಜಮುಖನನ್ನ ಸ್ವಾಗತಿಸಲು ಹಳ್ಳಿಯಿಂದ ದಿಲ್ಲಿವರೆಗೆ, ಗಲ್ಲಿ ಗಲ್ಲಿಯಲ್ಲೂ ಗಣಪತಿ ಬಪ್ಪಾ ಮೋರಿಯಾ ಎಂಬ ಕೂಗುವಿಕೆ ಕೇಳಿಬರುತ್ತಿದೆ.
ಬೆಂಗಳೂರಿನಲ್ಲಿ ಹೇಗಿದೆ?: ಇಂದು ಬೆಳ್ಳಂಬೆಳಗ್ಗೆಯೇ ಕೆ.ಆರ್.ಮಾರುಕಟ್ಟೆ ಸೇರಿದಂತೆ ಅನೇಕ ಕಡೆ ಜನರು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದರು. ಹೂ-ಹಣ್ಣು, ಎಕ್ಕದ ಹೂ ಹಾರ, ಗರಿಕೆಗೆ ಭಾರೀ ಬೇಡಿಕೆಯಿದ್ದು, ಖರೀದಿಸಲು ಬಂದವರಿಗೆ ಹೂ-ಹಣ್ಣಿನ ಸ್ವಲ್ಪ ಮಟ್ಟಿನ ದರ ಹೆಚ್ಚಳದಿಂದ ಕೊಂಚ ಬೇಸರವಾದರೂ, ಹಬ್ಬಕ್ಕೆ ಭರ್ಜರಿಯಾಗೇ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು ಬೆಂಗಳೂರಿನ ಹಲವೆಡೆ ಕೆಲ ಸಂಘ-ಸಂಸ್ಥೆಗಳು, ಯುವಕರು ಸೇರಿ ಮಕ್ಕಳು , ಅಕ್ಕಪಕ್ಕದ ಏರಿಯಾ ನಿವಾಸಿಗಳಿಗೆ ಮಣ್ಣಿನ ಗೌರಿ-ಗಣೇಶ ಮೂರ್ತಿ ಹಂಚಿ ಸಂಭ್ರಮಿಸಿದರು. ಗೌರಿ-ಗಣೇಶ ಹಬ್ಬ ಎರಡು ಒಟ್ಟಿಗೆ ಬಂದಿರೋದರಿಂದ ಜನರು ಇಬ್ಬರನ್ನೂ ಬರ ಮಾಡಿಕೊಳ್ಳೋಕೆ ಸಜ್ಜಾಗಿದ್ದಾರೆ. ಅಕಾಲಿಕ ಮಳೆಯಿಂದ ಹಬ್ಬಕ್ಕೂ ಕೊಂಚ ಎಫೆಕ್ಟ್ ತಟ್ಟಿದ್ದು ಹೂ-ಹಣ್ಣುಗಳ ದರ ನಿಯಮಿತವಾಗಿ ಏರಿಕೆಯಾಗಿದೆ.
ಒಟ್ಟಿನಲ್ಲಿ ದರ ಏರಿಕೆಯ ಮಧ್ಯೆ ಕೂಡ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಗೌರಿ-ಗಣೇಶರನ್ನ ಬರಮಾಡಿಕೊಳ್ಳುವ ಕಾತುರದಲ್ಲಿ ಜನರು ಕಾದು ಕುಳಿತಿದ್ದಾರೆ.
ಮೈಸೂರು ಅಗ್ರಹಾರದ 101 ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಒಂದೇ ದೇಗುಲದಲ್ಲಿರುವ 101 ಗಣಪತಿ ವಿಗ್ರಹಗಳಿವೆ. ಅಶ್ವಿನಿ, ಭರಣಿ, ಕೃತ್ತಿಕಾ ರೋಹಿಣಿ, ಮೃಗಶಿರಾ ಸೇರಿದಂತೆ 27 ವಿದಧ ಗಣಪ, ದ್ವಿಜ ಗಣಪತಿ ಸಿದ್ದಿ ಗಣಪತಿ ಸಂಕಷ್ಟಹರ ಗಣಪತಿ ವರ ಗಣಪತಿ ಸೇರಿದಂತೆ 27 ವಿವಿಧ ಗಣಪತಿ ವಿಗ್ರಹಗಳಿವೆ.
ಬೆಂಗಳೂರಿನ ದೊಡ್ಡ ಗಣೇಶ ದೇವಸ್ಥಾನ ಹಾಗೂ ಪುಟ್ಟೇನಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಶುರುವಾಗಿದೆ. ಪಂಚಾಭಿಷೇಕ, ಪುಷ್ಪಾಭಿಷೇಕ ನೆರವೇರಿಸಿ ನಂತರ ಬೆಣ್ಣೆ ಅಲಂಕಾರ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆಯವರೆಗೂ ವಿಶೇಷ ಪೂಜೆ ಇರಲಿದೆ. ಹೀಗಾಗಿ ದೊಡ್ಡ ಗಣೇಶ ಹಾಗೂ ಪುಟ್ಟೆನಗಳ್ಳಿ ಗಣೇಶ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
Advertisement