ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್'ನಲ್ಲಿ ಇಂದು ವಿಚಾರಣೆ, ಕರ್ನಾಟಕಕ್ಕೆ ಮಹತ್ವದ ದಿನ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದ್ದು, ಈ  ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಮಂದಿಟ್ಟು, ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದ್ದು, ಈ  ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಮಂದಿಟ್ಟು, ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಳಗ್ಗೆ 10:30ಕ್ಕೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯಲಿದೆ. ಇದರ ನಡುವೆ ಕಾವೇರಿ ನೀರಿಗಾಗಿ ರಾಜ್ಯರೈತರ ಪರವಾಗಿ ಸುಪ್ರೀಂಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಕೆಂಪರಾಜು ಮತ್ತು ಆರ್.ಪಿ.ರವಿ ಎಂಬುವರು ರಾಜ್ಯದ ರೈತರ ಪರವಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲ್ಲಿಸಿರುವ ಅರ್ಜಿಯ ಜೊತೆಗೆ ರೈತರ ಅರ್ಜಿ ಕೂಡ ವಿಚಾರಣೆ ನಡೆಯಲಿದೆ.

ಸಿಡಬ್ಲ್ಯೂಎಂಎ ಆದೇಶ ಪಾಲನೆ ಮಾಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಆಗಿದ್ದು, ಆದೇಶ ಪಾಲನೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ನೀರು ಬಿಡುಗಡೆಗೆ ಸಂಬಂಧಿಸಿ ಪ್ರಾಧಿಕಾರ ನೀಡಿರುವ ಎಲ್ಲಾ ಆದೇಶಗಳನ್ನು ಕರ್ನಾಟಕ ಪಾಲಿಸಿದೆ. ವಿಚಾರಣೆ ವೇಳೆ ಕರ್ನಾಟಕದ ಬಗ್ಗೆ ನ್ಯಾಯಪೀಠಕ್ಕೆ ನಕಾರಾತ್ಮಕ ಅಭಿಪ್ರಾಯ ಬರಬಾರದು ಎಂಬ ಉದ್ದೇಶದಿಂದಲೇ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದ ಕರ್ನಾಟಕ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಮುಂದೇನು ಮಾಡಬೇಕು ಎಂಬುದರ ಕುರಿತು ಚರ್ಚಿಸುವ ನಿಟ್ಟಿನಲ್ಲಿ ನಿನ್ನೆ(ಸೆ.20) ದೆಹಲಿ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಕೇಂದ್ರ ಸಚಿವರು ಹಾಗೂ ಎಲ್ಲ ಸಂಸದರ ಜತೆ ಸಭೆ ನಡೆಸಿದರು.

ಈ ಸಭೆಯಲ್ಲಿ ಕಾವೇರಿ ವಿಚಾರ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಾಧಿಕಾರದ ನಿರ್ಧಾರದಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕಿದೆ. ಈ ಹಿನ್ನೆಲೆ‌ ಕೇಂದ್ರ ಸಚಿವರು ಮತ್ತು ಬಿಜೆಪಿ ಸಂಸದರು ಪ್ರಧಾನಿ ಮೋದಿ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಭೇಟಿಗೆ ಸಮಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು.

ಇದರಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಗೆ ಸಮಯ ನಿಗದಿಯಾಗಿದೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಮುಖ್ಯಮಂತ್ರಿ ಮತ್ತು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ಆಗಿರುವ ಡಿ.ಕೆ.ಶಿವಕುಮಾರ್ ಗಜೇಂದ್ರ ಸಿಂಗ್ ಶೇಖಾವತ್‌ರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಆದರೆ, ಪ್ರಧಾನಿ ಮೋದಿ ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂದು ಡಿಸಿಎಂ ಡಿ.ಕೆ,ಶಿವಕುಮಾರ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ರೈತರ ಪ್ರತಿಭಟನೆಗಳು ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com