ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ದರೋಡೆ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ!

ವಿಮಾನದಲ್ಲಿ ನಗರಕ್ಕೆ ಬಂದು ದರೋಡೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ದರೋಡೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಸಲೀಂ ರಫೀಕ್ ಶೇಖ್ (ಅಲಿಯಾಸ್ ಬಾಂಬೆ ಸಲೀಂ 46), ಯಾಸಿನ್ ಮಕ್ಬುಲ್ ಖಾನ್ (47) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 11 ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 67 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಅಮೃತಹಳ್ಳಿ, ಕೊಡಿಗೇಹಳ್ಳಿ, ಎಂಐಸಿಒ ಲೇಔಟ್‌, ಆರ್‌ಆರ್‌ನಗರ, ತುಮಕೂರು, ಬೆಳಗಾವಿಯಲ್ಲಿ ಮನೆ ಕಳ್ಳತನ ಮಾಡಿದ್ದರು. ಇಬ್ಬರ ಪೈಕಿ ಖಾನ್ ಸುಮಾರು 35 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನು ಮೇಲೆ ಹೊರ ಬಂದಿದ್ದ.

ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ, ಆರೋಪಿ ಸಲೀಂ ರೀಲ್ಸ್ ಸ್ಟಾರ್ ಆಗಿದ್ದು, ಮನೆಗಳ್ಳತನ ಕೃತ್ಯದಿಂದ ಸಂಪಾದಿಸಿದ ಹಣದಲ್ಲಿ ಈತ ಮೋಜು ಮಸ್ತಿ ನಡೆಸುತ್ತಿದ್ದ. ಕದ್ದ ಒಡವೆಗಳನ್ನು ಧರಿಸಿಕೊಂಡು ಇನ್ ಸ್ಟಾ ಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದ. ಈತ ಯೂಟ್ಯೂಬ್ ಚಾನೆಲ್ ಕೂಡ ಓಪನ್ ಮಾಡಿದ್ದಾನೆಂದು ತಿಳಿಸಿದ್ದಾರೆ.

ಆರೋಪಿಗಳು ಜನವರಿ 23 ರಂದು ಬಿ ಸೆಕ್ಟರ್‌ನ ಅಮೃತನಗರದಲ್ಲಿರುವ ಆರ್ ಗಿರೀಶ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಈ ಸಮಯದಲ್ಲಿ ಗಿರೀಶ್ ಅವರು ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದ ವೇಳೆ ಕಳ್ಳತನ ಮಾಡಿದ್ದರು.

ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಗಿರೀಶ್ ಅವರು ಕಾರ್ಯನಿರ್ವಹಿಸುತ್ತಿದ್ದು, ಮನೆಯಲ್ಲಿ ಕಳ್ಳತನವಾದ ಹಿನ್ನೆಲೆಯಲ್ಲಿ ಗಿರೀಶ್ ಅವರು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರಿಬ್ಬರು ವೃತ್ತಿಪರ ಕಳ್ಳರು ಎಂದು ತಿಳಿದುಬಂದಿತ್ತು,

ಆರೋಪಿಗಳು ಮುಂಬೈ, ಗುಜರಾತ್ ಮತ್ತು ಇತರ ಸ್ಥಳಗಳಿಂದ ಆಗಾಗ್ಗೆ ತಮ್ಮ ಅಡಗುತಾಣಗಳನ್ನು ಬದಲಾಯಿಸುತ್ತಿದ್ದರು. ಆದರೆ, ನಗರದ ಪೊಲೀಸರು ಕೊನೆಗೂ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com