ಸವಾರಿಗೆ ಕುದುರೆ ನೀಡದ ಬಾಲಕನ ಹತ್ಯೆ: ಮೂವರು ಆರೋಪಿಗಳ ಬಂಧನ

ಇತ್ತೀಚೆಗೆ ಪಿಳ್ಳಣ್ಣ ಗಾರ್ಡನ್‌ನ ರೈಲ್ವೆ ಹಳಿಗಳ ಬಳಿ ನಡೆದಿದ್ದ 15 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೆ.ಜಿಹಳ್ಳಿ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ಪಿಳ್ಳಣ್ಣ ಗಾರ್ಡನ್‌ನ ರೈಲ್ವೆ ಹಳಿಗಳ ಬಳಿ ನಡೆದಿದ್ದ 15 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೆ.ಜಿಹಳ್ಳಿ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಸುಹೇಲ್ ಉಲ್ಲಾ ಶರೀಫ್ (19), ಸೈಯದ್ ಶೋಯಬ್ (20) ಮತ್ತು ಮಹಮ್ಮದ್ ಹುಸೇನ್ (18) ಎಂದು ಗುರ್ತಿಸಲಾಗಿದೆ.

ಪ್ರಕರಣವನ್ನು ಕೈಗೆತ್ತಿಕ್ಕೊಂಡಿದ್ದ ಪೊಲೀಸರಿಗೆ ಆರಂಭದಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವುಗಳು ಸಿಕ್ಕಿರಲಿಲ್ಲ. ನಂತರ 3-4 ದಿನಗಳ ಕಾಲ 60-70 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಆರೋಪಿಗಳ ಕುರಿತು ಕೆಲ ಸುಳಿವುಗಳು ಸಿಕ್ಕಿದ್ದವು.

ಈ ಸುಳಿವಿನ ಆಧಾರದ ಮೇಲೆ, ಪೊಲೀಸರು ಆರೋಪಿಗಳ ಜಾಲವನ್ನು ಪತ್ತೆ ಮಾಡಿ ಮೂವರನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ಬಾಲಕ ಸತೀಶ್ ಪಿಳ್ಳಪ್ಪ ಗಾರ್ಡನ್ ಸಮೀಪವಿರುವ ಕುದುರೆ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ, ಕುದುರೆ ವೀಕ್ಷಣೆಗೆ ಬರುತ್ತಿದ್ದ ಜನರಿಗೆ ಒಂದು ಸುತ್ತು ಸವಾರಿ ಮಾಡಿಸಿ ಆತ ಹಣ ಪಡೆಯುತ್ತಿದ್ದ. ಕೊಲೆಗೆ ಎರಡು ವಾರಗಳ ಮೊದಲು, ಆರೋಪಿ ಶರೀಫ್ ಫೋಟೋ ತೆಗೆಸಿಕೊಳ್ಳಲು ಕುದುರೆಯ ಮೇಲೆ ಕುಳಿತುಕೊಳ್ಳಬಹುದೇ ಎಂದು ಸತೀಶ್‌ನನ್ನು ಕೇಳಿದ್ದ, ಇದಕ್ಕೆ ಸತೀಶ್ ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಸತೀಶ್'ಗೆ ಶರೀಫ್ ಕಪಾಳಮೋಕ್ಷ ಮಾಡಿದ್ದ.

ಈ ಘಟನೆ ನಡೆದ ವಾರಗಳ ಬಳಿತ ಸತೀಶ್ ತನ್ನ ಸ್ನೇಹಿತರೊಂದಿಗೆ ಲಿಂಗರಾಜಪುರಂನ ಟೀ ಸ್ಟಾಲ್‌ನಲ್ಲಿ ಕುಳಿತಿದ್ದ. ಅಲ್ಲಿಗೆ ಷರೀಫ್ ಕೂಡ ಹೋಗಿದ್ದಾನೆ. ಈ ವೇಳೆ ಸತೀಶ್ ಜಗಳವಾಡಿ ಕಪಾಳಮೋಕ್ಷ ಮಾಡಿದ್ದಾನೆ.

ಏಪ್ರಿಲ್ 2 ರ ಸಂಜೆ ತನ್ನ ಸ್ನೇಹಿತರೊಂದಿಗೆ ಪಿಳ್ಳಣ್ಣ ಗಾರ್ಡನ್‌ನಲ್ಲಿದ್ದ ಷರೀಫ್, ಸತೀಶ್‌ನನ್ನು ಸ್ಥಳದಲ್ಲಿ ನೋಡಿದ್ದಾನೆ. ಈ ವೇಳೆ ಆತನನ್ನು ಮಾತನಾಡಿಸುವ ನೆಪದಲ್ಲಿ ರೈಲ್ವೆ ಹಳಿ ಬಳಿ ಕರೆದೊಯ್ದಿದ್ದ. ಬಳಿಕ ಆರೋಪಿಗಳು ರೈಲ್ವೇ ಹಳಿ ಬಳಿ ದೊಣ್ಣೆಗಳಿಂದ ಬಾಲಕನ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com