ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡ ಬೆಂಗಳೂರಿನಲ್ಲಿ ನಿರ್ಮಾಣ!
ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಹಲಸೂರು ಬಜಾರ್ ಅಂಚೆ ಕಚೇರಿಯು ಕರ್ನಾಟಕದ ಮೊದಲ 3ಡಿ-ಮುದ್ರಿತ ಸಾರ್ವಜನಿಕ ಕಟ್ಟಡವಾಗಲಿದೆ.
Published: 12th April 2023 04:14 PM | Last Updated: 12th April 2023 07:27 PM | A+A A-

3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡ ನಿರ್ಮಾಣ
ಬೆಂಗಳೂರು: ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದು, ಹಲಸೂರು ಬಜಾರ್ ಅಂಚೆ ಕಚೇರಿಯು ಕರ್ನಾಟಕದ ಮೊದಲ 3ಡಿ-ಮುದ್ರಿತ ಸಾರ್ವಜನಿಕ ಕಟ್ಟಡವಾಗಲಿದೆ.
ಹೌದು.. ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ ಈ ವಿಶೇಷ ಅಂಚೇ ಕಚೇರಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಅಂಚೆ ಕಚೇರಿಯ ನಿರ್ಮಾಣ ವೆಚ್ಚವು ಸಾಂಪ್ರದಾಯಿಕ ಕಟ್ಟಡವನ್ನು ನಿರ್ಮಿಸುವುದಕ್ಕಿಂತ ಸುಮಾರು ಶೇ.30 ರಿಂದ 40 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಕೇವಲ 30 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇ 6 ರಂದು ಕರ್ನಾಟಕವು ತನ್ನ ಮೊದಲ 3D ಕಾಂಕ್ರೀಟ್-ಮುದ್ರಿತ ಸಾರ್ವಜನಿಕ ಕಟ್ಟಡವನ್ನು ಹೊಂದಲಿದೆ.
3ಡಿ ಮುದ್ರಿತ ಅಂಚೆ ಕಛೇರಿಯು ಸುಮಾರು 1100 ಚದರ ಅಡಿ ವಿಸ್ತೀರ್ಣ ಮತ್ತು ನಿರ್ಮಾಣದ ವೆಚ್ಚ 23 ಲಕ್ಷ ರೂಪಾಯಿ ಎಂದು ವರದಿಗಳು ತಿಳಿಸಿವೆ. ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ಬಳಕೆ ಬೆಂಗಳೂರು ನಿವಾಸಿಗಳ ಕುತೂಹಲವನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿದೆ.
PHOTOS: ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡ ಬೆಂಗಳೂರಿನಲ್ಲಿ ನಿರ್ಮಾಣ!
ಲಾರ್ಸೆನ್ & ಟೂಬ್ರೊ ಲಿಮಿಟೆಡ್ (L&T) ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಈ ಮೂರು ಆಯಾಮದ ಮುದ್ರಣ ತಂತ್ರಜ್ಞಾನದಿಂದ ನಿರ್ಮಿಸಲಿದೆ. ಈ ಪೋಸ್ಟ್ ಆಫೀಸನ್ನು ಸುಮಾರು 23 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಾಮಾನ್ಯವಾಗಿ ಅಂಚೆಕಚೇರಿಗೆ ನಿರ್ಮಾಣವಾಗುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಅಂಚೆ ಕಚೇರಿ ನಿರ್ಮಾಣವಾಗಲಿದೆ. ಇತರೆ ಸಾಮಾನ್ಯ ಅಂಚೆ ಕಚೇರಿ ನಿರ್ಮಿಸಲು ಮಾಡಬೇಕಿರುವ ವೆಚ್ಚಕ್ಕಿಂತ ಈ ತಂತ್ರಜ್ಞಾನದಿಂದ ಶೇಕಡ 30-40 ಕಡಿಮೆ ವೆಚ್ಚದಲ್ಲಿ ಪೋಸ್ಟ್ ಆಫೀಸ್ ನಿರ್ಮಿಸಬಹುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಅಂಚೆಕಚೇರಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ತ್ವರಿತವಾಗಿ ನಿರ್ಮಾಣಗೊಳ್ಳುತ್ತಿದೆ.
ದೊಡ್ಡ ಪ್ರಮಾಣದಲ್ಲಿ ಮಾಡಿದಾಗ ವೆಚ್ಚ ಕಡಿಮೆ
ಸುದ್ದಿಗಾರರಿಗೆ ಮಾಹಿತಿ ನೀಡಿದ ಲಾರ್ಸೆನ್ ಅಂಡ್ ಟೂಬ್ರೊ ಕನ್‌ಸ್ಟ್ರಕ್ಷನ್‌ನ (ಕಟ್ಟಡಗಳು) ನಿರ್ದೇಶಕ ಮತ್ತು ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ ವಿ ಸತೀಶ್, “ಈ ಶುಕ್ರವಾರದೊಳಗೆ (ಏಪ್ರಿಲ್ 14) ಇಲ್ಲಿ ಮುದ್ರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಾಂಪ್ರದಾಯಿಕವಾಗಿ ನಿರ್ಮಿಸಲಾದ ಕಟ್ಟಡಗಳಿಗಿಂತ ಇದು ನೀಡುವ ಅನುಕೂಲಗಳು ಸಮಯದ ಪರಿಭಾಷೆಯಲ್ಲಿ ದೊಡ್ಡ ಉಳಿತಾಯವಾಗಿದೆ. 1100 ಚದರ ಅಡಿಗಳಲ್ಲಿ ನಿರ್ಮಿಸಲಾದ ಈ ಅಂಚೆ ಕಚೇರಿಯ ನಿರ್ಮಾಣವು 6 ತಿಂಗಳಿಂದ 8 ತಿಂಗಳ ನಡುವೆ ಎಲ್ಲಿಯಾದರೂ ತೆಗೆದುಕೊಳ್ಳುತ್ತದೆ. ಇಲ್ಲಿ ಕೇವಲ 45 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ. ಕೆಲಸವನ್ನು ಪೂರ್ಣಗೊಳಿಸಲು ನಮಗೆ ಐದು ಜನರು ಮಾತ್ರ ಅಗತ್ಯವಿದೆ. ವೆಚ್ಚದ ಅಂಶದ ಬಗ್ಗೆ ಕೇಳಿದಾಗ, ವೆಚ್ಚವು ಈಗಿನಂತೆಯೇ ಕಾರ್ಯನಿರ್ವಹಿಸುತ್ತದೆ. ಭವಿಷ್ಯದಲ್ಲಿ ನಾವು ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದಾಗ, ಅದು ಕಡಿಮೆಯಾಗಬಹುದು ಎಂದು ಹೇಳಿದರು.

3D ಕಾಂಕ್ರೀಟ್ ರಚನೆಯು ತುಂಬಾ ಪ್ರಬಲವಾಗಿದೆ ಎಂದು ಒತ್ತಿ ಹೇಳಿದ ಸತೀಶ್, ತಂತ್ರಜ್ಞಾನವನ್ನು ಬಿಲ್ಡಿಂಗ್ ಮೆಟೀರಿಯಲ್ಸ್ ಮತ್ತು ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್ (BMTPC) ಅನುಮೋದಿಸಿದೆ ಮತ್ತು ಪೋಸ್ಟ್ ಆಫೀಸ್‌ನ ರಚನಾತ್ಮಕ ವಿನ್ಯಾಸವನ್ನು ಐಐಟಿ ಮದ್ರಾಸ್ ಮಾನ್ಯ ಮಾಡಿದೆ ಎಂದರು.
3D ತಂತ್ರಜ್ಞಾನ ಕಡಿಮೆ ವೆಚ್ಚದ ವಸತಿಗಳ ಬಗ್ಗೆ ಆಸಕ್ತಿ ಉತ್ತೇಜಿಸುತ್ತದೆ
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರು “3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದ ನಿರ್ಮಾಣ ಆಯ್ಕೆಗಳೊಂದಿಗೆ ಅಂಚೆ ಕಚೇರಿಗಳನ್ನು ನಿರ್ಮಿಸಲು ನೋಡುತ್ತಿದ್ದಾರೆ. 3D ತಂತ್ರಜ್ಞಾನವು ಭವಿಷ್ಯವಾಗಿರುವುದರಿಂದ, ಅಂತಹ ಉಪಕ್ರಮಗಳು ಕಡಿಮೆ ವೆಚ್ಚದ ವಸತಿಗಳ ಬಗ್ಗೆ ಆಸಕ್ತಿಯನ್ನು ಉತ್ತೇಜಿಸುತ್ತದೆ ಎಂದರು. ಅಂತೆಯೇ 3ಡಿ ತಂತ್ರಜ್ಞಾನದ ಯೋಜನೆಯನ್ನು ಕಳೆದ ವರ್ಷವೇ ಪೋಸ್ಟ್ ಆಫೀಸ್ ಅನ್ನು ಘೋಷಿಸಲಾಯಿತು ಆದರೆ ಅದು ಈಗ ಪ್ರಾರಂಭವಾಗಿದೆ. ಭವಿಷ್ಯದಲ್ಲಿ ಈ ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಅಂಚೆ ಕಚೇರಿಗಳನ್ನು ನಿರ್ಮಿಸಲು ಈ ಯೋಜನೆಯ ಬಗ್ಗೆ ವರದಿಯನ್ನು ಸಲ್ಲಿಸಲು ರಾಜೇಂದ್ರ ಕುಮಾರ್ ಯೋಜಿಸಿದ್ದಾರೆ.
Look ma, they are 3D printing a building outside my house! @peakbengaluru pic.twitter.com/GVrRoC0b9u
— Marisha Thakur (@MarishaThakur) April 6, 2023
ವೈರಲ್ ಆದ ನಿರ್ಮಾಣ ಕಾರ್ಯದ ವಿಡಿಯೋ
ಕಳೆದ ವಾರ 3D ಪ್ರಿಂಟಿಂಗ್ ನಿರ್ಮಾಣ ಕಾರ್ಯದ ವೀಡಿಯೊವನ್ನು ಅಲ್ಲಿನ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದು ವ್ಯಾಪಕ ವೈರಲ್ ಆಗಿತ್ತು. "ನೋಡಿ, ಅವರು ನನ್ನ ಮನೆಯ ಹೊರಗೆ ಕಟ್ಟಡವನ್ನು 3D ಮುದ್ರಿಸುತ್ತಿದ್ದಾರೆ!" ಎಂದು ಅವರು ಟ್ವೀಟ್ ಮಾಡಿದ್ದರು. ಅವರು ನಿರ್ಮಾಣ ಕಾರ್ಯದ ವೀಡಿಯೊಗಳು ಮತ್ತು ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದರು. "ನಿರ್ಮಾಣ ಕಾಮಗಾರಿಯು ಮಾರ್ಚ್ 20 ರ ಸುಮಾರಿಗೆ ಪ್ರಾರಂಭವಾಯಿತು. ಕಟ್ಟಡ ನಿರ್ಮಾಣದ ಸದ್ದು ಹೆಚ್ಚಿಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ!
ಕಟ್ಟಡದ ಕುರಿತು ಆಸಕ್ತಿ ತೋರಿದ ಬಯೋಕಾನ್ ಮುಖ್ಯಸ್ಥೆ
ಇನ್ನು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಈ ಯೋಜನೆ ಬಗ್ಗೆ ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. ಶಾ ಏಪ್ರಿಲ್ 10 ರಂದು ಮುಂಬರುವ ಅಂಚೆ ಕಚೇರಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು “ದೇಶದ ಮೊದಲ 3D-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ಬರುತ್ತಿದೆ – ಇದು ಮುಂಬರುವ ಭವಿಷ್ಯದ ವಸ್ತುಗಳ ಆಕಾರವಾಗಿದೆ ಎಂದು ಭಾವಿಸುತ್ತೇನೆ!” ಎಂದು ಬರೆದುಕೊಂಡಿದ್ದಾರೆ.
Country’s first 3D-printed post office coming up in Bengaluru - hope this is the shape of things to come!! https://t.co/IpmhbDXYER
— Kiran Mazumdar-Shaw (@kiranshaw) April 10, 2023
ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸೆಲ್‌ಲಿಂಕ್ ಕಂಪನಿಗಳ ಸಹಯೋಗದಲ್ಲಿ ಐಐಎಸ್ಸಿಯಲ್ಲಿ ಸ್ಥಾಪಿಸಿರುವ ಭಾರತದ ಪ್ರಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಉದ್ಘಾಟಿಸಿದ್ದರು. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಈಗ ಅಂಗಾಂಶಗಳು ಮತ್ತು ಜೀವಕೋಶಗಳನ್ನು ಆಧರಿಸಿದ ಚಿಕಿತ್ಸೆಗಳು ಮುಂಚೂಣಿಗೆ ಬರುತ್ತಿದ್ದು, ಇವು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿವೆ. ಮುಂಬರುವ ವರ್ಷಗಳಲ್ಲಿ ಆಯಾ ವ್ಯಕ್ತಿಗಳ ಶರೀರ ಸ್ವಭಾವವನ್ನು ಆಧರಿಸಿ, ರೋಗಗಳನ್ನು ಗುಣಪಡಿಸುವತಹ ನಿರ್ದಿಷ್ಟ ಬಗೆಯ ಚಿಕಿತ್ಸಾ ಕ್ರಮಗಳು ಜನಪ್ರಿಯವಾಗಲಿದೆ. ಇದರಲ್ಲಿ 3ಡಿ ಬಯೋಪ್ರಿಂಟಿಂಗ್ ಮಹತ್ತರ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದರು.