ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2022-23 ನೇ ಸಾಲಿನಲ್ಲಿ ಬರೋಬ್ಬರಿ 3.19 ಕೋಟಿ ಮಂದಿ ಪ್ರಯಾಣ ಮಾಡಿದ್ದು, ಆ ಮೂಲಕ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯಾ ಪ್ರಮಾಣದಲ್ಲಿ ಶೇ.96ರಷ್ಚು ಏರಿಕೆಯಾಗಿದೆ.
ಹೌದು.. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) 2022-23 ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 96 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 31.91 ಮಿಲಿಯನ್ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಮಾನ ನಿಲ್ದಾಣವು ಹಿಂದಿನ ವರ್ಷಕ್ಕಿಂತ ದೇಶೀಯ ವಲಯದಲ್ಲಿ (28.12 ಮಿಲಿಯನ್ ಪ್ರಯಾಣಿಕರು) ಶೇಕಡಾ 85 ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ (3.78 ಮಿಲಿಯನ್ ಪ್ರಯಾಣಿಕರು) 245 ಶೇಕಡಾ ಪ್ರಯಾಣಿಕರ ಹೆಚ್ಚಳವನ್ನು ತೋರಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಮಾಹಿತಿ ಪ್ರಕಾರ, 2022-23ನೇ ಸಾಲಿನಲ್ಲಿ 31.91 ದಶಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರೊಂದಿಗೆ 2022-23ನೇ ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 96ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಬಿಐಎಎಲ್‌ನ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, ಈ ವಾರ್ಷಿಕ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿನ ಚೇತರಿಕೆ ಅತ್ಯಂತ ಸಂತಸ ಮೂಡಿಸಿದೆ. ವಾಯುಯಾನ ಉದ್ಯಮದ ಚೇತರಿಕೆಯು ಒಂದು ಅಸಾಧಾರಣ ಕಾರ್ಯವಾಗಿದೆ. ನಮ್ಮ ಪ್ರಯಾಣಿಕರು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಸಹಾಯ ಹಾಗೂ ಸರ್ಕಾರಿ ಸಂಸ್ಥೆಗಳ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಪ್ರಮುಖ ಮಾರ್ಗಗಳ ಮರು-ಪರಿಚಯ ಮತ್ತು ಪ್ರಮುಖ ವ್ಯಾಪಾರ ಮತ್ತು ವಿರಾಮ ಸ್ಥಳಗಳ ನಡುವೆ ಹೊಸ ಸಂಪರ್ಕಗಳ ಸೇರ್ಪಡೆಯು ತ್ವರಿತ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
37 ಲಕ್ಷಕ್ಕೂ ಅಧಿಕ ಮಂದಿ ವಿದೇಶಕ್ಕೆ ಹಾರಾಟ
2022-23 ನೇ ಸಾಲಿನಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಪೈಕಿ 28.12 ದಶಲಕ್ಷ ದೇಶೀಯ ಮತ್ತು 3.78 ದಶಲಕ್ಷ ಮಂದಿ ವಿದೇಶಿ ಪ್ರಯಾಣಿಕರು. ದೇಶೀಯ ವಿಮಾನಯಾನ ಕ್ಷೇತ್ರ ಶೇ 85ರಷ್ಟು ಬೆಳವಣಿಗೆ ಸಾಧಿಸಿದ್ದರೆ, ಅಂತರರಾಷ್ಟ್ರೀಯ ವಿಮಾನಯಾನ ಕ್ಷೇತ್ರ ಶೇ. 245ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಬಿಐಎಎಲ್ ತಿಳಿಸಿದೆ.
ಫೆಬ್ರವರಿ 26, 2023ರಂದು ಕೆಐಎ ಒಂದೇ ದಿನದಲ್ಲಿ 1,14,299 ಮಂದಿ ಪ್ರಯಾಣಿಕರು ಪ್ರಯಾಣಿಸಿರುವುದಾಗಿ ತಿಳಿಸಿದೆ. ಸಾಂಕ್ರಾಮಿಕ ನಂತರದ ವಿಮಾನ ಕಾರ್ಯಾಚರಣೆಗಳ ಪುನರಾರಂಭ, ಪ್ರಮುಖ ಮಾರ್ಗಗಳ ಮರು-ಪರಿಚಯ ಮತ್ತು ಹೊಸ ಮಾರ್ಗಗಳ ಪ್ರಾರಂಭದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ BIAL ಕಾರಣವಾಗಿದೆ. ವಿಮಾನ ನಿಲ್ದಾಣವು ಈಗ ಒಟ್ಟು 100 ಸ್ಥಳಗಳಿಗೆ 75 ಭಾರತೀಯ ಮತ್ತು 25 ಅಂತಾರಾಷ್ಟ್ರೀಯ ಸಂಪರ್ಕ ಹೊಂದಿದೆ.
ಇನ್ನು, ಪ್ರಯಾಣಿಕರ ಅನುಕೂಲಕ್ಕಾಗಿ ಚಾಲನೆ ನೀಡಿದ ಹೊಸ ಸೇವೆಗಳ ಪೈಕಿ, ಸಿಡ್ನಿಗೆ ಕ್ವಾಂಟಾಸ್‌ನ ಸೇವೆ, ಎಮಿರೇಟ್ಸ್‌ನಿಂದ ದೈನಂದಿನ ಏರ್‌ಬಸ್ ಎ380 ಸೇವೆ ಆರಂಭ ಪ್ರಮುಖವಾಗಿದೆ. ಟರ್ಮಿನಲ್ 2 (ಟಿ2) ನ ಇತ್ತೀಚಿನ ಕಾರ್ಯಚರೆಣೆಯಿಂದಾಗಿ, ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಗೇಟ್‌ವೇ ಆಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಹಿಂದೆಂದಿಗಿಂತಲೂ ಉತ್ತಮವಾಗಿ ಸಜ್ಜಾಗಿದೆ. ಅಲ್ಲದೆ ಇಲ್ಲಿನ ಪ್ರಯಾಣಿಕರ ತೃಪ್ತಿ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುವುದನ್ನು ಮುಂದುವರಿಸುವುದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಹಾಗೂ ಉತ್ತಮಗೊಳಿಸುವ ತಮ್ಮ ಬದ್ಧತೆಯು ಅಚಲವಾಗಿ ಉಳಿದಿದೆ ಎಂದು ಅವರು ತಿಳಿಸಿದರು.
ಕೊರೋನಾ ನಂತರ ವಿಮಾನಯಾನದ ಅತಿ ದೊಡ್ಡ ಬದಲಾವಣೆ ಇದಾಗಿದ್ದು, 2018 ಕ್ಕೂ ಮುನ್ನ ಪ್ರಯಾಣಿಕರ ಸಂಖ್ಯೆ 30 ದಶಲಕ್ಷ ದಾಟುತ್ತಿತ್ತು. ಕೊರೋನಾ ಬಳಿಕ ಈ ಪ್ರಮಾಣ ಸಾಕಷ್ಟು ತಗ್ಗಿತ್ತು. ಕೊರೋನಾ ನಂತರದಲ್ಲಿ ಪ್ರಮುಖ ಮಾರ್ಗಗಳ ಮಧ್ಯೆ ವಿಮಾನ ಸೇವೆ ಪೂರ್ಣ ಪ್ರಮಾಣದಲ್ಲಿ ಮರು ಕಾರ್ಯಾಚರಣೆ ಆರಂಭ ಮಾಡಿರುವುದು, ಪ್ರಮುಖ ವ್ಯಾಪಾರ ಕೇಂದ್ರಗಳು ಮತ್ತು ಪ್ರಯಾಣದ ಸ್ಥಳಗಳನ್ನು ಸಂಪರ್ಕಿಸುವ ಹೊಸ ಮಾರ್ಗಗಳ ಪ್ರಾರಂಭಿಸಲಾಯಿತು. ಹೀಗಾಗಿಯೇ, ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ವಿಮಾನ ನಿಲ್ದಾಣವು ಎರಡನೇ ಟರ್ಮಿನಲ್ ಸೇವೆಯನ್ನು ಕೂಡಾ ಆರಂಭಿಸಿದ್ದು, ಆಕಾಶ್ ಸೇರಿದಂತೆ ಹೊಸ ವಿಮಾನ ಯಾನ ಸಂಸ್ಥೆಗಳು ಅಗ್ಗದ ದರದಲ್ಲಿ ವಿಮಾನ ಸೇವೆ ಆರಂಭಿಸಿವೆ. ಈ ಅಂಶವೂ ಕೂಡಾ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ವರ್ಷದಲ್ಲಿ KIA ವಾಯು ಸಾರಿಗೆ ಚಲನೆಗಳಲ್ಲಿ (ಎಟಿಎಂ) 50.8 ಪ್ರತಿಶತದಷ್ಟು ಒಟ್ಟಾರೆ ಬೆಳವಣಿಗೆಯನ್ನು ದಾಖಲಿಸಿದೆ. ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಇಂಡಿಗೋ 57 ಶೇಕಡಾ ಪಾಲನ್ನು ಹೊಂದಿದ್ದು, ಟಾಟಾ ಗ್ರೂಪ್ ಏರ್‌ಲೈನ್ಸ್ ಒಟ್ಟು 27 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. ಎಂಟು ತಿಂಗಳಲ್ಲಿ ಕೆಐಎಯ ದೇಶೀಯ ಕಾರ್ಯಾಚರಣೆಗಳಲ್ಲಿ 10 ಪ್ರತಿಶತ ಮಾರುಕಟ್ಟೆ ಪಾಲನ್ನು ಪಡೆಯಲು ಆಕಾಶ ಏರ್ ಯಶಸ್ವಿಯಾಗಿದೆ ಎಂದು BIAL ಹೇಳಿದೆ.
Advertisement