
ಸಂಗ್ರಹ ಚಿತ್ರ
ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ಘಟನೆಯೊಂದು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸಾವಿತ್ರಮ್ಮ (55) ಹತ್ಯೆಯಾದ ಮಹಿಳೆಯಾಗಿದ್ದಾರೆ, ಆರೋಪಿಯನ್ನು ಮಲ್ಲಿಕಾರ್ಜುನ ಎಂದು ಗುರ್ತಿಸಲಾಗಿದ್ದು, ಈತನನ್ನ ಬಂಧನಕ್ಕೊಳಪಡಿಸಿರುವ ಪೊಲೀಸರು, ನ್ಯಾಯಾಂಗ ಬಂಧನದಲ್ಲಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಸಾವಿತ್ರಮ್ಮ ಅವರ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಸಂಬಂಧಿಯಾಗಿರುವ ಮೃತ ಸಾವಿತ್ರಮ್ಮ, ಶುಕ್ರವಾರ ಬೆಳಗ್ಗೆ ರಾಗಿ ಹಿಟ್ಟು ಮಾಡಿಸಲು ಹಿಟ್ಟಿನ ಗಿರಣಿಗೆ ಹೋಗಿದ್ದರು, ಬಳಿಕ ನಾಪತ್ತೆಯಾಗಿದ್ದರು. ಸಂಜೆಯವರೆಗೂ ಆಕೆ ಹಿಂತಿರುಗದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.
ಹುಡುಕಾಟದ ವೇಳೆ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಸಾವಿತ್ರಮ್ಮ ಅವರ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಅನುಮಾನಾಸ್ಪದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಈ ವೇಲೆ ಆರೋಪಿ ಕತ್ತು ಹಿಸುಕಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾವಿತ್ರಮ್ಮ ಹಾಗೂ ಆರೋಪಿ ನಡುವೆ ಹಳೇ ವೈಷಮ್ಯವಿತ್ತು ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿಯೇ ಆರೋಪಿ ಹತ್ಯೆ ಮಾಡಿದ್ದಾನೆಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.