ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಮೂವರನ್ನು ವಶಕ್ಕೆ ಪಡೆದ ಪೊಲೀಸರು, 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಇಬ್ಬರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದ ಹಲಸೂರು ಗೇಟ್ ಠಾಣೆ ಪೊಲೀಸರು, 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.
ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದು.
ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದು.

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಇಬ್ಬರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದ ಹಲಸೂರು ಗೇಟ್ ಠಾಣೆ ಪೊಲೀಸರು, 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ನೀಡಿದ ದೂರಿನ ಮೇರೆಗೆ ನಿರ್ಲಕ್ಷ್ಯದ ಆರೋಪದಡಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಾದ ಆನಂದ್, ಸ್ವಾಮಿ, ಡಿ ಗ್ರೂಪ್ ನೌಕರ ಸುರೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶನಿವಾರ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಬಿಬಿಎಂಪಿ ನೌಕರರನ್ನು ಅನುಮಾನಿಸುತ್ತಿಲ್ಲ. ಆದರೆ, ಕಾರ್ಯವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ಅವರು ಹೇಳಿದ್ದಾರೆ.

ಶನಿವಾರ ಬೆಳಗ್ಗೆ 10 ಗಂಟೆಗೆ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಆನಂದ್ ಮತ್ತು ಸ್ವಾಮಿ ಮತ್ತು ಗ್ರೂಪ್ ಡಿ ಉದ್ಯೋಗಿ ಸುರೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಬಂದ ಅವರನ್ನು ರಾತ್ರಿ 8.30 ರವರೆಗೆ ವಿಚಾರಣೆ ನಡೆಸಲಾಯಿತು. ಅಗತ್ಯವಿದ್ದರೆ, ಸೋಮವಾರ ತನಿಖಾ ಅಧಿಕಾರಿಗಳ ಮುಂದೆ ಮತ್ತೆ ಹಾಜರಾಗುವಂತೆ ತಿಳಿಸಲಾಗುವುದು. ಇತರ ಒಂಬತ್ತು ಮಂದಿ ಸುಟ್ಟಗಾಯಗಳಾಗಿದ್ದರೆ, ಈ ಮೂವರು ಮಾತ್ರ ಹೇಗೆ ಪಾರಾದರು ಎಂಬುದರ ಕುರಿತು ಪ್ರಶ್ನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮತ್ತು ಆನಂದ್ ನಡುವೆ ದೂರವಾಣಿ ಸಂಭಾಷಣೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊದಲಿನಿಂದಲೂ ನಾವು ಲ್ಯಾಬ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಸಾಂಪಲ್ ಕಲೆಕ್ಟ್ ಮಾಡಿ ಅಲ್ಲಿ ಟೆಸ್ಟ್ ಮಾಡುತ್ತೇವೆ. ಮೊದಲೇ ಅವರಿಗೆ ಟ್ರೈನಿಂಗ್ ಆಗಿದೆ. ಬೆಲ್ಜಿನ್‌ ಕೆಮಿಕಲ್‌ ಹಾಕಿ ಟೆಸ್ಟ್‌ ಮಾಡುವಾಗ ಸೋರಿಕೆಯಾಗಿ ಈ ರೀತಿ ಘಟನೆ ಸಂಭವಿಸಿದೆ. ಬೆಲ್ಜಿನ್‌ ಹಾಕಿ ವಾಶ್ ಮಾಡುವಾಗ ಹೊರಗೆ ಹೋಗಿದೆ. ಈ ವೇಳೆ ಕೆಲವೇ ಸೆಕಂಡ್‌ಗಳಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿರುವ ಆನಂದ್ ಅವರು, ನಾವು ನೆಲ ಮಹಡಿಯಲ್ಲಿದ್ದೆವು. ಹೀಗಾಗಿಯೇ ನಮಗೆ ಏನೂ ಆಗಲಿಲ್ಲ. ಪ್ರಯೋಗಾಲಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮೇಲಿನ ಮಹಡಿಯಲ್ಲಿದ್ದವರು ಹೊರಗೆ ಬರಲು ಸಾಧ್ಯವಾಗದೆ, ಗಾಯಗಳಾದವು. ಬಳಿಕ ಹೊರಗೆ ಬಂದ ನಾವು ಇತರರೊಂದಿಗೆ ಸೇರಿಕೊಂಡು ಬೆಂಕಿ ನಂದಿಸಲು ಪ್ರಯತ್ನ ನಡೆಸಿದೆವು. ನಂತರ ಪೊಲೀಸರ ವಾಹನಗಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿರುವುದು ಸಂಭಾಷಣೆಯಲ್ಲಿ ತಿಳಿದುಬಂದಿದೆ.

ಈ ನಡುವೆ ಪ್ರಕಱಣವನ್ನು ಮೂರು ತಂಡಗಳಿಂದ ಪ್ರತ್ಯೇಕ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

2019ರಿಂದ 2022ರವರೆಗೆ ಬೆಂಗಳೂರಿನಲ್ಲಿ ನಡೆಸಿದ ಎಲ್ಲಾ ಕಾಮಗಾರಿಗಳನ್ನೂ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದರ ನಡುವಲ್ಲೇ ಬಿಬಿಎಂಪಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವಂತೆ ಮಾಡಿದೆ. ಅಕ್ರಮಗಳ ಎಸಗಿದ ಅಧಿಕಾರಿಗಳು ಅಗ್ನಿ ಅವಘಡದ ಹಿಂದೆ ಇದ್ದಾರೆಂಬ ಆರೋಪಗಳು ಕೇಳಇ ಬಂದಿದೆ.

ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಒಂಬತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ ರಮೇಶ್ ಕೃಷ್ಣ  ಅವರು ತಿಳಿಸಿದ್ದಾರೆ.

9 ಮಂದಿಯ ಸ್ಥಿತಿ ಈಗ ಸ್ಥಿರವಾಗಿದೆ. ಆದಾಗ್ಯೂ, ಮುಂದಿನ 24 ಗಂಟೆಗಳು ನಿರ್ಣಾಯಕವಾಗಿವೆ. ರಾಸಾಯನಿಕಗಳಿಂದ ಹೊರಹೊಮ್ಮಿದ ಹೊಗೆಯನ್ನು ಉಸಿರಾಡಿದ್ದರಿಂದ ಅವರ ಶ್ವಾಸಕೋಶದಲ್ಲಿ ಸಮಸ್ಯೆಗಳಾಗಿರುವ ಸಾಧ್ಯತೆಗಳಿವೆ. ಮುಖ್ಯ ಎಂಜಿನಿಯರ್ ಶಿವಕುಮಾರ್ ಮತ್ತು ಆಪರೇಟರ್ ಜ್ಯೋತಿ ಅವರನ್ನು ತುರ್ತುನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಅಗ್ನಿ ಅವಘಡದಲ್ಲಿ ಕಡತಗಳು ನಾಶವಾಗಿವೆಯೇ ಎಂಬುದನ್ನು ತಿಳಿಯಲು ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com