
ಬೆಂಗಳೂರು: ಕರ್ನಾಟಕದಾದ್ಯಂತ ಸರ್ಕಾರಿ ಕೆಂಪು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಆಗಸ್ಟ್ 15 ರ ನಂತರ ಸ್ಥಗಿತಗೊಳ್ಳಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿಯಾಗಿತ್ತು.
ಇದಕ್ಕೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ದೊರಕಿದ್ದು, ಶಕ್ತಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯವು 900 ಕೋಟಿ ರೂಪಾಯಿಗಳನ್ನು ದಾಟಿ 945 ಕೋಟಿ ರೂಪಾಯಿಗಳಷ್ಟಾಗಿದ್ದು, ಒಟ್ಟು ಪ್ರಯಾಣಿಕರಲ್ಲಿ ಶೇಕಡಾ 55 ರಷ್ಟು ಮಹಿಳೆಯರಾಗಿದ್ದಾರೆ ಎಂದು ಹೇಳಿದೆ.
ಯೋಜನೆ ಪ್ರಾರಂಭವಾದ ಜೂನ್ 11 ರಿಂದ, ಆಗಸ್ಟ್ 16 ರವರೆಗೆ ಒಟ್ಟು ಪ್ರಯಾಣಿಕರ ಸಂಖ್ಯೆ 73.87 ಕೋಟಿ, ಅವರಲ್ಲಿ 40.65 ಕೋಟಿ ಮಹಿಳಾ ಪ್ರಯಾಣಿಕರಾಗಿದ್ದು, ಎಲ್ಲಾ ನಾಲ್ಕು ಬಸ್ ನಿಗಮಗಳಾದ ಕೆಎಸ್ ಆರ್ ಟಿಸಿ,ಕೆಕೆಆರ್ ಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ.
ಬಸ್ ನಿಗಮಗಳು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಬಿಎಂಟಿಸಿಯಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರಿದ್ದು, ಒಟ್ಟು 24.66 ಕೋಟಿ ಪ್ರಯಾಣಿಕರ ಪೈಕಿ 13.35 ಕೋಟಿ ಪ್ರಯಾಣಿಕರಿದ್ದಾರೆ. ಇದರ ನಂತರ ಕೆಎಸ್‌ಆರ್‌ಟಿಸಿ, ಒಟ್ಟು 22.09 ಕೋಟಿ ಪ್ರಯಾಣಿಕರಲ್ಲಿ 12.34 ಕೋಟಿ ಮಹಿಳಾ ಪ್ರಯಾಣಿಕರನ್ನು ಹೊಂದಿದೆ. ಎನ್ ಡಬ್ಲ್ಯುಕೆಆರ್ ಟಿಸಿ 9.51 ಕೋಟಿ ಮಹಿಳಾ ಪ್ರಯಾಣಿಕರನ್ನು ದಾಖಲಿಸಿದರೆ, ಒಟ್ಟು 16.27 ಕೋಟಿಯಲ್ಲಿ, ಕೆಕೆಆರ್ ಟಿಸಿ ಒಟ್ಟು 10.83 ಕೋಟಿಯಲ್ಲಿ 5.44 ಕೋಟಿ ಮಹಿಳಾ ಪ್ರಯಾಣಿಕರನ್ನು ದಾಖಲಿಸಿದೆ.
ಒಟ್ಟು ಟಿಕೆಟ್ ಮೌಲ್ಯದಲ್ಲಿ ಕೆಎಸ್‌ಆರ್‌ಟಿಸಿ 357.21 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎನ್‌ಡಬ್ಲ್ಯೂಕೆಆರ್‌ಟಿಸಿ ರೂ.237.24 ಕೋಟಿ, ಕೆಕೆಆರ್‌ಟಿಸಿ ರೂ.180.19 ಕೋಟಿ ಮತ್ತು ಬಿಎಂಟಿಸಿ 170.66 ಕೋಟಿ ರೂಪಾಯಿಗಳಾಗಿದೆ.
ಗೃಹ ಜ್ಯೋತಿ ಅಡಿಯಲ್ಲಿ 1.51 ಕೋಟಿ ಗ್ರಾಹಕರು: ಆಗಸ್ಟ್ 15 ರವರೆಗೆ ಒಟ್ಟು 1.51 ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದು ವಿದ್ಯುತ್ ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ. ಎಲ್ಲಾ ಗೃಹ ಸಂಪರ್ಕಗಳಿಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಯ ನೋಂದಣಿ ಜೂನ್ 18 ರಂದು ಪ್ರಾರಂಭವಾಯಿತು. ಜುಲೈ 27 ರಂದು 1,40,31,320 ಗ್ರಾಹಕರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಇದರಲ್ಲಿ ಅರ್ಹ ಗ್ರಾಹಕರು ತಮ್ಮ ಆಗಸ್ಟ್ ಬಿಲ್ಲಿಂಗ್‌ನಲ್ಲಿ ಶೂನ್ಯ ಬಿಲ್‌ಗಳನ್ನು ಪಡೆಯುತ್ತಿದ್ದಾರೆ. ಜುಲೈ 28 ರಿಂದ ಆಗಸ್ಟ್ 15 ರವರೆಗೆ ಸುಮಾರು 10.83 ಲಕ್ಷ ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಅರ್ಹ ಗ್ರಾಹಕರು ಸೆಪ್ಟೆಂಬರ್ ತಿಂಗಳ ಬಿಲ್ಲಿಂಗ್ ನಲ್ಲಿ ಶೂನ್ಯ ಬಿಲ್‌ಗಳನ್ನು ಪಡೆಯುತ್ತಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಅಡಿಯಲ್ಲಿ ನೋಂದಾಯಿಸಿದ ಗ್ರಾಹಕರು ಗೃಹ ಜ್ಯೋತಿ ಯೋಜನೆಯಲ್ಲಿ ಒಳಪಡುತ್ತಾರೆ.
Advertisement